ದೋಸೆ ತಿನ್ನಲೆಂದು ಒಂಟಿಯಾಗಿ ಹೋಟೆಲ್ ಗೆ ಹೋಗಿದ್ದ ಐಪಿಎಸ್ ಅಧಿಕಾರಿಗೆ ಬಿಲ್ ನೋಡಿ ಶಾಕ್ ಆಗಿದೆ. ಯಾಕೆಂದರೆ ಅವರು ತಿಂದದ್ದು ಒಂದು ದೋಸೆ ಮಾತ್ರ . ಆದ್ರೆ ಬಂದಿದ್ದು 2 ದೋಸೆಯ ಬಿಲ್. ಅರೆ ಇದೇಗೆ ಎಂದು ಪ್ರಶ್ನೆ ಮಾಡಿದ್ದಕ್ಕೆ ಸಿಕ್ಕ ಉತ್ತರಕ್ಕೆ ಐಪಿಎಸ್ ಅಧಿಕಾರಿ ಕಕ್ಕಾಬಿಕ್ಕಿಯಾಗಿದ್ದಾರೆ.
ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ ಅವರು ರೆಸ್ಟೋರೆಂಟ್‌ಗೆ ದೋಸೆ ತಿನ್ನಲು ಹೋಗಿದ್ದಾಗ ನಡೆದ ಪ್ರಸಂಗವನ್ನ ತಮ್ಮ ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ.
”ದೋಸೆ ತಿನ್ನಲು ಒಬ್ಬನೇ ರೆಸ್ಟೋರೆಂಟ್‌ಗೆ ಹೋಗಿದ್ದೆ. ಎರಡು ದೋಸೆ ಎಂದು ನಮೂದಿಸಿದ್ದ ಬಿಲ್ ನೋಡಿ ಆಶ್ಚರ್ಯವಾಯಿತು. ಮಾಣಿಯನ್ನು ಕೇಳಿದಾಗ, ಇನ್ನೊಂದು ಬದಿಯಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿಯು ನಿಮ್ಮ ಜೊತೆಯಲ್ಲಿ ಬಂದಿರುವುದಾಗಿ ಹೇಳಿ ಮಸಾಲೆ ದೋಸೆ ತೆಗೆದುಕೊಂಡರು. ಆದರೆ ಬಿಲ್ ಬರುವಷ್ಟರಲ್ಲಿ ಆತ ಹೊರಟು ಹೋಗಿದ್ದ.’’ ಎಂದು ತಮ್ಮ ಹೆಸರೇಳಿ ಮತ್ತೊಬ್ಬರು ದೋಸೆ ತಿಂದು ಬಿಲ್ ಬರುವಷ್ಟರಲ್ಲಿ ಪರಾರಿಯಾಗಿದ್ದ ಪ್ರಸಂಗವನ್ನ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಟ್ವೀಟಿಗರು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ.
ಆತ ಬಹುಶಃ ನಿಮ್ಮ ಅನುಯಾಯಿ ಇರಬಹುದು ಎಂದಿದ್ದಾರೆ. ಪೊಲೀಸರಿಗೇ ವಂಚನೆಯೇ ? ಮುಂದಿನ ಬಾರಿ ನಮ್ಮನ್ನು ಆಹ್ವಾನಿಸಿ. ನಾವು ಅಪರಾಧಿಯ ಮೇಲೆ ನಿಗಾ ಇಡುತ್ತೇವೆ ಎಂದೆಲ್ಲಾ ಪ್ರತಿಕ್ರಿಯಿಸಿದ್ದಾರೆ.
ಒಡಿಶಾ ಕೇಡರ್‌ನ ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ ಟ್ವಿಟರ್‌ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅವರು ಟ್ವಿಟರ್ ನಲ್ಲಿ 2.6 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಅಲ್ಲಿ ಅವರು ತಮಾಷೆಯಿಂದ ಕೂಡಿದ ಗಂಭೀರ ವಿಷಯಗಳನ್ನೊಳಗೊಂಡ ವಿಷಯಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.