ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಬಳಕೆದಾರರಿಗೆ ಖುಷಿ ಸುದ್ದಿಯೊಂದಿದೆ. ಟ್ವಿಟರ್ ಬಳಕೆದಾರರಿಗೆ ಕಂಪನಿ, ಗಳಿಕೆಗೆ ಅವಕಾಶ ನೀಡ್ತಿದೆ. ಸೆಪ್ಟೆಂಬರ್ 1ರಿಂದಲೇ ಹೊಸ ಫೀಚರ್ ಸೂಪರ್ ಫಾಲೋಸ್ ಶುರು ಮಾಡಿದೆ. ಸದ್ಯ ಐಫೋನ್ ಬಳಕೆದಾರರಿಗೆ ಮಾತ್ರ ಈ ಸೌಲಭ್ಯ ನೀಡಲಾಗ್ತಿದೆ. ಯುಎಸ್ ಮತ್ತು ಕೆನಡಾದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ.
ಶೀಘ್ರದಲ್ಲೇ ಈ ವೈಶಿಷ್ಟ್ಯವನ್ನು ಜಾಗತಿಕವಾಗಿ ಐಒಎಸ್ ಬಳಕೆದಾರರಿಗೆ ನೀಡುವುದಾಗಿ ಕಂಪನಿ ಹೇಳಿದೆ. ಖಾತೆಯ ಪ್ರೊಫೈಲ್ ನಲ್ಲಿ ಸೂಪರ್ ಫಾಲೋ ಬಟನ್ ಇರುತ್ತದೆ. ಟ್ಯಾಪ್ ಮಾಡಿದಾಗ ಅದ್ರ ಮೇಲೆ ಶುಲ್ಕ ಕಾಣಿಸುತ್ತದೆ. ಇದ್ರ ಬಗ್ಗೆ ಆಸಕ್ತಿ ಹೊಂದಿರುವ ಬಳಕೆದಾರರು ಇದನ್ನು ಮತ್ತೊಮ್ಮೆ ಕ್ಲಿಕ್ ಮಾಡಿ, ಚಂದಾದಾರಿಕೆ ಪಡೆಯಬಹುದಾಗಿದೆ.
ಟ್ವಿಟರ್ ಇದಕ್ಕೆ ಕೆಲ ಷರತ್ತುಗಳನ್ನು ವಿಧಿಸಿದೆ. ಸೂಪರ್ ಫಾಲೋ ಚಂದಾದಾರಿಕೆಗೆ ಅರ್ಹರಾಗಲು, 10,000 ಅಥವಾ ಹೆಚ್ಚಿನ ಅನುಯಾಯಿಗಳನ್ನು ಹೊಂದಿರಬೇಕು. 18 ವರ್ಷ ವಯಸ್ಸಾಗಿರಬೇಕು. ಕಳೆದ 30 ದಿನಗಳಲ್ಲಿ 25 ಬಾರಿ ಟ್ವೀಟ್ ಮಾಡಿರಬೇಕು. ಉತ್ತಮ ವಿಷ್ಯ, ಸಂಗತಿಯನ್ನು ಜನರಿಗೆ ತಲುಪಿಸುವ ಉದ್ದೇಶ ಹೊಂದಿರುವವರನ್ನು ಗಮನದಲ್ಲಿಟ್ಟುಕೊಂಡು ಸೂಪರ್ ಫಾಲೋ ಫೀಚರ್ ಶುರು ಮಾಡಲಾಗಿದೆ.