
ರಾಹುಲ್ ಗಾಂಧಿಯ ಆರೋಪವನ್ನು ತಳ್ಳಿ ಹಾಕಿರುವ ಅವರು, ಟ್ವಿಟರ್ ಸ್ಪಾಮ್ ಹಾಗೂ ನಕಲಿ ಫಾಲೋವರ್‌ಗಳ ಹೆಚ್ಚಳದ ಕುರಿತಂತೆ ಅತ್ಯುನ್ನತ ತಂತ್ರಜ್ಞಾನದ ಮೂಲಕ ನಿಗಾವಹಿಸುತ್ತದೆ. ಇದರಿಂದಾಗಿ ಫಾಲೋವರ್‌ಗಳ ಸಂಖ್ಯೆಯಲ್ಲಿ ಏರಿಳಿತವಾಗುತ್ತದೆ ಎಂದು ತಿಳಿಸಿದ್ದಾರೆ.
ಮ್ಯಾನಿಪ್ಯುಲೇಷನ್ ಮತ್ತು ಸ್ಪ್ಯಾಮ್ ಮೂಲಕ ಟ್ವಿಟರ್ನ ನೀತಿಗಳನ್ನು ಉಲ್ಲಂಘಿಸುವ ಲಕ್ಷಾಂತರ ಖಾತೆಗಳನ್ನು ಪ್ರತಿವಾರ ತೆಗೆದುಹಾಕುತ್ತೇವೆ. ಈ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಟ್ವಿಟರ್ ಟ್ರಾನ್ಸ್ಪರೆನ್ಸಿ ಸೆಂಟರ್ಅನ್ನು ಗಮನಿಸಬಹುದು ಎಂದು ತಿಳಿಸಿದ್ದಾರೆ.
ಅಲ್ಲದೇ ಟ್ವಿಟರ್ನ ಈ ಕಾರ್ಯನಿರ್ವಹಣೆಯಿಂದ ಕೆಲವು ಖಾತೆಗಳಲ್ಲಿ ಸಣ್ಣ ಬದಲಾವಣೆಯಾದರೆ ಮತ್ತೆ ಕೆಲವು ಖಾತೆಗಳಿಗೆ ಹೆಚ್ಚಿನ ಪರಿಣಾಮ ಉಂಟಾಗುತ್ತದೆ ಎಂದೂ ಅವರು ಹೇಳಿದ್ದಾರೆ. ಮ್ಯಾನಿಪ್ಯುಲೇಷನ್ ಮತ್ತು ಸ್ಪ್ಯಾಮ್ ಅನ್ನು ಟ್ವಿಟ್ಟರ್ ಸಹಿಸಿಕೊಳ್ಳುವುದಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಪರಾಗ್ ಅಗರ್ವಾಲ್ ಗೆ ಬರೆದ ಪತ್ರದಲ್ಲಿ ಏನಿತ್ತು..?
ಡಿಸೆಂಬರ್ 27ರಂದು ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ ಅವರಿಗೆ ಪತ್ರ ಬರೆದಿದ್ದ ರಾಹುಲ್, ಸಾಮಾಜಿಕ ಜಾಲತಾಣ ವೇದಿಕೆಯು ನರೇಂದ್ರ ಮೋದಿ ಸರಕಾರದ ಒತ್ತಡದ ಅಡಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರಬಹುದು ಎಂದು ಆರೋಪಿಸಿದ್ದರು.
ನನ್ನ ಖಾತೆ ಪ್ರತಿ ತಿಂಗಳೂ ಸರಾಸರಿ 2.3 ಲಕ್ಷಕ್ಕೂ ಅಧಿಕ ಹೊಸ ಫಾಲೋವರ್‌ಗಳನ್ನು ಪಡೆದುಕೊಳ್ಳುತ್ತಿತ್ತು. ಈ ಸಂಖ್ಯೆ ಕೆಲವು ತಿಂಗಳಲ್ಲಿ 6.5 ಲಕ್ಷಕ್ಕೂ ತಲುಪಿತ್ತು. ಆದರೆ 2021ರ ಆಗಸ್ಟ್‌ನಿಂದ ಖಾತೆಯ ಹೊಸ ಫಾಲೋವರ್‌ಗಳ ಸಂಖ್ಯೆ ತಿಂಗಳಿಗೆ ಕೇವಲ 2,500ಕ್ಕೆ ಕುಸಿದಿದೆ. ಹಾಗೂ 19.5 ಮಿಲಿಯನ್ ಒಟ್ಟು ಫಾಲೋವರ್‌ಗಳ ಸಂಖ್ಯೆಯನ್ನು ವರ್ಚ್ಯುವಲ್ ಆಗಿ ತಡೆಹಿಡಿಯಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.