ಟ್ವಿಟರ್ ಬ್ಲೂ ಇದೀಗ ಅಮೆರಿಕ ಹಾಗೂ ನ್ಯೂಜಿಲೆಂಡ್ನ ಬಳಕೆದಾರರಿಗೆ ಲಭ್ಯವಿದೆ ಎಂದು ಕಂಪನಿ ಮಾಹಿತಿ ನೀಡಿದೆ.
ʼಟ್ವಿಟರ್ ಬ್ಲೂʼ ಎಂಬುವುದು ಟ್ವಿಟರ್ ಮೈಕ್ರೋಬ್ಲಾಗಿಂಗ್ ವೇದಿಕೆ ನೀಡುತ್ತಿರುವ ಚಂದಾದಾರಿಕೆಯ ಸೇವೆಯಾಗಿದೆ. ಈ ಸೇವೆಯ ಮೂಲಕ ನೀವು ಟ್ವೀಟ್ಗಳನ್ನು ರದ್ದು ಗೊಳಿಸುವ ಹಾಗೂ ಯಾವುದೇ ಜಾಹಿರಾತುಗಳಿಲ್ಲದೇ ಸುದ್ದಿಗಳನ್ನು ಓದುವ ಸಾಮರ್ಥ್ಯವನ್ನು ಹೊಂದಲಿದ್ದೀರಿ. ಈ ಹೊಸ ವೈಶಿಷ್ಟ್ಯದ ಮೂಲಕ ಟ್ವಿಟರ್ ಸಂಸ್ಥೆಯು ತನ್ನ ಆದಾಯ ಹೆಚ್ಚಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ಟ್ವಿಟರ್ ಬ್ಲೂ ಚಂದಾದಾರಿಕೆಯು ತಿಂಗಳಿಗೆ 222 ರೂಪಾಯಿಗಳಿಗೆ ಅಮೆರಿಕದಲ್ಲಿ ಲಭ್ಯವಿದೆ. ಈ ಚಂದಾದಾರಿಕೆಯ ಮೂಲಕ ಯಾವುದೇ ಜಾಹಿರಾತುಗಳಿಲ್ಲದೇ ಸುದ್ದಿಯನ್ನು ಓದಬಹುದು, ದೀರ್ಘ ಅವಧಿಯ ವಿಡಿಯೋಗಳನ್ನು ಅಪ್ಲೋಡ್ ಮಾಡಬಹುದು ಹಾಗೂ ಟ್ವಿಟರ್ ಅಪ್ಲಿಕೇಶನ್ನಲ್ಲಿ ನೇವಿಗೇಷನ್ ಬಾರ್ನ್ನು ಕಸ್ಟಮೈಸ್ ಮಾಡಬಹುದಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಈ ವೈಶಿಷ್ಟ್ಯದ ಮೂಲಕ ಬಳಕೆದಾರರ ಬಹುಬೇಡಿಕೆಯ ಟ್ವೀಟ್ ರದ್ದುಗೊಳಿಸುವ ಆಯ್ಕೆಯು ನಿಮ್ಮ ಪಾಲಾಗಲಿದೆ. ಇದರಿಂದಾಗಿ ಬಳಕೆದಾರರು ತಮ್ಮ ಟ್ವೀಟ್ನ್ನು ಪೋಸ್ಟ್ ಮಾಡುವ ಮುನ್ನ ಒಂದು ನಿಮಿಷಗಳ ಕಾಲ ಟ್ವೀಟ್ನ್ನು ಪ್ರೀವೀವ್ ಮಾಡಲು ಹಾಗೂ ಬದಲಾವಣೆಗಳನ್ನು ಮಾಡಲು ಅವಕಾಶ ಇರಲಿದೆ. ಆದರೆ ಇಲ್ಲಿಯವರೆಗೆ ಟ್ವಿಟರ್ ಸಂಸ್ಥೆ ಬಹುಬೇಡಿಕೆಯ ಎಡಿಟ್ ಟ್ವೀಟ್ ಆಯ್ಕೆಯನ್ನು ನೀಡಿಲ್ಲ. ಹೀಗಾಗಿ ಈ undo ಆಯ್ಕೆಯು ಬಳಕೆದಾರರಿಗೆ ಟ್ವಿಟರ್ನಲ್ಲಿ ಯಾವುದೇ ಪ್ರಮಾದ ಉಂಟಾಗದಂತೆ ಎಚ್ಚರ ವಹಿಸಲಿದೆ.