ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನು ಕೊಂದು ಆತನ ದೇಹವನ್ನು ಮಹಾರಾಷ್ಟ್ರದ ಸಾವಂತವಾಡಿಯ ಅಂಬೋಲಿ ಘಾಟ್ ನಲ್ಲಿ ಬಿಸಾಡುವ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. 30 ವರ್ಷದ ಬಾವುಸಾ ಮಾನೆ ಸಾವನ್ನಪ್ಪಿದವನಾಗಿದ್ದಾನೆ.
ಘಟನೆಯ ವಿವರ: ಬಾವುಸಾ ಮಾನೆ ತನ್ನ ಸ್ನೇಹಿತ ಸುಶಾಂತ್ ಕಿಲಾರೆ ಎಂಬಾತನ ಜೊತೆ ಹಣಕಾಸಿನ ವ್ಯವಹಾರ ನಡೆಸಿದ್ದು ಇಬ್ಬರ ನಡುವೆ ವೈಮನಸ್ಯ ಮೂಡಿತ್ತು. ಈ ಹಿನ್ನಲೆಯಲ್ಲಿ ತನ್ನ ಮತ್ತೊಬ್ಬ ಸ್ನೇಹಿತ ತುಷಾರ್ ಪವಾರ್ ಎಂಬಾತನೊಂದಿಗೆ ಸೇರಿ ಭಾನುವಾರದಂದು ಹತ್ಯೆ ಮಾಡಿದ್ದ. ಈ ಮೂವರು ಸತಾರಾದ ಕರಾಡ್ ನಿವಾಸಿಗಳು ಎನ್ನಲಾಗಿದೆ.
ಬಳಿಕ ಸುಶಾಂತ್ ಕೊಲೆ ಮುಚ್ಚಿಡುವ ಸಲುವಾಗಿ ಕಾರಿನಲ್ಲಿ ಆತನ ದೇಹವನ್ನು ಹಾಕಿಕೊಂಡು 400 ಕಿ.ಮೀ. ದೂರದ ಅಂಬೋಲಿ ಘಾಟಿಗೆ ಬಂದಿದ್ದರು. ಸುಶಾಂತ್ ಮೃತ ದೇಹವನ್ನು ಮೇಲಿನಿಂದ ಬಿಸಾಡುವಾಗ ಬಾವುಸಾ ಮಾನೆ ಆಯತಪ್ಪಿ ಅದರ ಜೊತೆಗೇ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಕೂದಲೆಳೆ ಅಂತರದಲ್ಲಿ ಸಾವಿನಿಂದ ತಪ್ಪಿಸಿಕೊಂಡ ತುಷಾರ್ ಪವಾರ್ ಸಮೀಪದ ಹಳ್ಳಿಗೆ ಬಂದು ಬಾವುಸಾ ಕುಟುಂಬಸ್ಥರಿಗೆ ನಡೆದ ವಿಷಯ ತಿಳಿಸಿದ್ದಾನೆ. ಮಂಗಳವಾರದಂದು ದೇಹವೊಂದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ ವೇಳೆ ಸಂಪೂರ್ಣ ವೃತ್ತಾಂತ ಬಹಿರಂಗವಾಗಿದೆ.