ಕೇರಳದ ಪಾಲಕ್ಕಾಡ್ ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 9 ಜನ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಚಾಲಕರು ಸಂಚಾರಿ ಕಾನೂನು ಉಲ್ಲಂಘಿಸುವುದು ಕಂಡುಬಂದಲ್ಲಿ ಸಾಮಾಜಿಕ ಸೇವೆ ಮತ್ತು ತರಬೇತಿ ಕಡ್ಡಾಯಗೊಳಿಸಿದೆ. ಈ ಸಂಬಂಧ ಸಾರಿಗೆ ಸಚಿವ ಆಂಟನಿ ರಾಜು ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಹೊಸ ಕಾನೂನುಗಳ ಪ್ರಕಾರ, ಗಂಭೀರವಾದ ರಸ್ತೆ ಅಪಘಾತಗಳಲ್ಲಿ ಭಾಗಿಯಾಗಿರುವ ಚಾಲಕರು ಮತ್ತು ಕುಡಿದು ವಾಹನ ಚಾಲನೆ ಮಾಡುವವರು ಕಡ್ಡಾಯವಾಗಿ ಟ್ರಾಮಾ ಕೇರ್ ಸೆಂಟರ್‌ಗಳು ಮತ್ತು ಉಪಶಾಮಕ ಆರೈಕೆ ಘಟಕಗಳಲ್ಲಿ ಕನಿಷ್ಠ ಮೂರು ದಿನಗಳವರೆಗೆ ಸೇವೆ ಸಲ್ಲಿಸಬೇಕಾಗುತ್ತದೆ. ಎಡಪ್ಪಲ್ ನಲ್ಲಿರುವ ಇನ್ ಸ್ಟಿಟ್ಯೂಟ್ ಆಫ್ ಡ್ರೈವರ್ ಟ್ರೈನಿಂಗ್ ಅಂಡ್ ರಿಸರ್ಚ್(ಐಡಿಟಿಆರ್)ನಲ್ಲಿ ಮೂರು ದಿನಗಳ ಕಡ್ಡಾಯ ತರಬೇತಿ ಪಡೆದುಕೊಳ್ಳಲು ಸಹ ಆದೇಶಿಸಲಾಗಿದೆ.
ಇದಲ್ಲದೆ ಅಕ್ರಮವಾಗಿ ಮಾರ್ಪಾಡು ಮಾಡಿ ಹಾರ್ನ್ ಅಳವಡಿಸುವ ದ್ವಿಚಕ್ರ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸುವ ಪ್ರವಾಸಿ ಬಸ್ ಗಳು, ಸರಕು ಸಾಗಣೆಯಂತಹ ಗುತ್ತಿಗೆ ಕ್ಯಾರೇಜ್ ಗಳ ಚಾಲಕರನ್ನು ಆರಂಭಿಕ ಹಂತದಲ್ಲಿ ಕಡ್ಡಾಯ ಸೇವಾ ಮತ್ತು ತರಬೇತಿ ಕಾರ್ಯಕ್ರಮಕ್ಕೆ ಒಳಪಡಿಸಲಾಗುವುದು ಎಂದು ಸಚಿವರ ಕಚೇರಿ ತಿಳಿಸಿದೆ.