ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ ಎನ್ನಲಾಗಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತನ್ನ ಎದುರಾಳಿಯನ್ನು ಸಿಲುಕಿಸಲು 38 ವರ್ಷದ ಮಹಿಳೆ ಗ್ಯಾಂಗ್ ರೇಪ್ ಆಗಿದೆ ಎಂದು ಸುಳ್ಳು ದೂರು ದಾಖಲಿಸಿರುವುದು ಪೊಲೀಸರ ತನಿಖೆ ವೇಳೆ ಬಹಿರಂಗವಾಗಿದೆ.
ಈ ಮಹಿಳೆ ತಾನು ಬಸ್ಸಿಗಾಗಿ ಕಾಯುತ್ತಿರುವಾಗ ಆರೋಪಿಗಳು ನನ್ನನ್ನು ಅಪಹರಿಸಿ ಎರಡು ದಿನಗಳ ಕಾಲ ಕೂಡಿಹಾಕಿ ಚಿತ್ರ ಹಿಂಸೆ ನೀಡಿದ್ದಲ್ಲದೇ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದಳು. ಈ ದೂರು ದಾಖಲಾದ ಬಳಿಕ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಂದ ಆಗ್ರಹ ಕೇಳಿ ಬಂದಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕೂಲಂಕುಶ ತನಿಖೆ ನಡೆಸಿದ ವೇಳೆ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಆಜಾದ್ ಎಂಬಾತನೊಂದಿಗೆ ಸೇರಿಕೊಂಡ ಮಹಿಳೆ ಎದುರುದಾರರನ್ನು ಸಿಲುಕಿಸಲು ಅತ್ಯಾಚಾರದ ಕಥೆ ಕಟ್ಟಿರುವುದು ಬೆಳಕಿಗೆ ಬಂದಿದೆ. ಇದೀಗ ಆಜಾದ್ ಮತ್ತು ಆತನ ಸಹಚರರಾದ ಗೌರವ್ ಮತ್ತು ಅಫ್ಜಲ್ ಎಂಬವರನ್ನು ಪೊಲೀಸರು ಬಂಧಿಸಿದ್ದು, ಸುಳ್ಳು ಪ್ರಕರಣ ದಾಖಲಿಸಿದ ಮಹಿಳೆ ವಿರುದ್ಧವೂ ಕ್ರಮಕ್ಕೆ ಮುಂದಾಗಿದ್ದಾರೆ.