ಬೆಂಗಳೂರು: ಟಿವಿ, ಡಿಶ್ ಕೇಬಲ್ ರಿಪೇರಿ ಎಂದು ಮನೆಗಳಿಗೆ ಬಂದು ಬೀಗ ಒಡೆದು ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಖದೀಮರನ್ನು ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆ ಪೊಲಿಸರು ಬಂಧಿಸಿದ್ದಾರೆ.
ತುಮಕೂರಿನ ಕ್ಯಾತಸಂದ್ರ ನಿವಾಸಿ ನಾಗರಾಜ್ ಅಲಿಯಾಸ್ ರಿಹಾನ್ (32) ಬಂಧಿತ ಆರೋಪಿ. 20 ಲಕ್ಷ ಮೌಲ್ಯದ 300 ಗ್ರಾಂ ಚಿನ್ನಾಭರಣ ಹಾಗೂ ಒಂದು ಕೆ.ಜಿ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಟಿವಿ ರಿಪೇರಿ ಮಾಡುವ ನೆಪದಲ್ಲಿ ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ. ಬಳಿಕ ಕದ್ದ ವಸ್ತುಗಳನ್ನು ಪತ್ನಿ ಮೂಲಕ ಮಾರಾಟ ಮಾಡಿಸುತ್ತಿದ್ದ. ಬ್ಯಾಡರಹಳ್ಳಿಯ ಚೇತನ್ ಸರ್ಕಲ್ ಬಳಿ ಮನೆಯೊಂದರಲ್ಲಿ ಕಳ್ಳತನ ನಡೆದಿತ್ತು. ಈ ಬಗ್ಗೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.