ಬೆಂಗಳೂರು: ಸರ್ಕಾರಿ ಶಾಲೆ, ಬಿಬಿಎಂಪಿ ಶಾಲೆಗಳಲ್ಲಿ ಓದುವ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ವರ್ಗದ ಜನವಸತಿ ಪ್ರದೇಶಗಳ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಸಂಜೆ ಟ್ಯೂಷನ್ ಆರಂಭಿಸಲಾಗುತ್ತದೆ.
ಬಿಬಿಎಂಪಿ ಕಲ್ಯಾಣ ವಿಭಾಗದಿಂದ ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರ ಕಾರ್ಯಕ್ರಮದಡಿ ಬೆಂಗಳೂರಿನ 10 ಸ್ಥಳಗಳಲ್ಲಿ ಪ್ರಾಯೋಗಿಕವಾಗಿ ಟ್ಯೂಷನ್ ಆರಂಭಿಸಲಾಗುವುದು. ಸೆಪ್ಟಂಬರ್ 5 ರಿಂದ ಸಂಜೆ ಟ್ಯೂಷನ್ ಆರಂಭವಾಗಲಿದೆ.
ಕೊಳಗೇರಿಗಳು, ಕಾರ್ಮಿಕರು ವಾಸಿಸುವ ಪ್ರದೇಶಗಳು, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗದ ಜನವಸತಿ ಪ್ರದೇಶಗಳಲ್ಲಿ ಮಕ್ಕಳಿಗೆ ಸಂಜೆ ಟ್ಯೂಷನ್ ಯೋಜನೆಯಿಂದ ಅನುಕೂಲವಾಗಲಿದೆ. ಪಾಲಿಕೆ ಆರಂಭಿಸುತ್ತಿರುವ ಟ್ಯೂಷನ್ ಗೆ ಅರ್ಧ ಕಿಲೋಮೀಟರ್ ವ್ಯಾಪ್ತಿಯ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ವರ್ಗದ ಕುಟುಂಬದ ಮೂರರಿಂದ ಐದನೇ ತರಗತಿ ಓದುತ್ತಿರುವ ಮಕ್ಕಳು ಸೇರಬಹುದು. ಪ್ರತಿ ಟ್ಯೂಷನ್ ಕೇಂದ್ರದಲ್ಲಿ 30 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತದೆ.
ಅಗಸ್ತ್ಯ ಫೌಂಡೇಶನ್ ಗೆ ಎಲ್ಲಾ ಕೇಂದ್ರಗಳ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ. ಕ್ವೀನ್ಸ್ ಲ್ಯಾಂಡ್, ಬೈರವೇಶ್ವರನಗರ, ಶ್ರೀರಾಮಪುರ, ಕಸ್ತೂರಿ ಬಾ ನಗರದಲ್ಲಿರುವ ಬಿಬಿಎಂಪಿ ಶಾಲಾ ಕಾಲೇಜುಗಳು ಸೇರಿದಂತೆ 10 ಕಡೆ ಪ್ರಾಯೋಗಿಕವಾಗಿ ಟ್ಯೂಷನ್ ನಡೆಸಲಾಗುವುದು. ಸೆಪ್ಟೆಂಬರ್ 5 ರ ಶಿಕ್ಷಕರ ದಿನಾಚರಣೆಯಂದು ಸಾಂಕೇತಿಕವಾಗಿ ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರ ಆರಂಭಿಸಲಾಗುತ್ತಿದೆ.