ಆಗಾಗ್ಗೆ ಹಲವರು ಬೈಕ್ ಅಥವಾ ಕಾರುಗಳಲ್ಲಿ ಉಚಿತ ಲಿಫ್ಟ್‍ಗಾಗಿ ರಸ್ತೆ ಬದಿಯಲ್ಲಿ ಕೈಚಾಚುತ್ತಾ ನಿಂತಿರುತ್ತಾರೆ. ಪರಿಚಯವೇ ಇಲ್ಲದವರೊಂದಿಗೆ, ಅವರ ಚಾಲನೆಯ ಅರಿವೇ ಇಲ್ಲದೆಯೇ ರಸ್ತೆಯಲ್ಲಿ ಸಂಚಾರ ಎಷ್ಟು ಅಪಾಯಕಾರಿ ಎನ್ನುವುದಕ್ಕೆ ನೀರಾನೆಯ ಬೆನ್ನಮೇಲೆ ಏರಿದ ಆಮೆಗಳ ಗುಂಪೊಂದು ವಿಡಿಯೊ ಮೂಲಕ ಜಾಗೃತಿ ಮೂಡಿಸುತ್ತಿದೆ.
ಸುಧಾ ರಾಮೆನ್ ಎಂಬ ಭಾರತೀಯ ಅರಣ್ಯ ಸೇವೆ (ಐಎಫ್‍ಎಸ್) ಅಧಿಕಾರಿಯೊಬ್ಬರು ತಮ್ಮ ಟ್ವಿಟರ್ ನಲ್ಲಿ ನೀರಾನೆಯ ವಿಡಿಯೊ ಹಂಚಿಕೊಂಡಿದ್ದಾರೆ. ನೀರಾನೆ ಕೆಸರಿನ ಕೆರೆಯಲ್ಲಿ ಮುಳುಗಿ ಕೂತಿದ್ದಾಗ, ಅದರ ಬೆನ್ನ ಮೇಲೆ ಸವಾರಿ ಮಾಡಲು ಸಣ್ಣ ಆಮೆಗಳ ಗುಂಪೊಂದು ಏರಿಕೊಳ್ಳುತ್ತದೆ. ಆದರೆ ನೀರಾನೆ ಏಕಾಏಕಿ ಎದ್ದು ನಿಂತು ಬೆನ್ನು ಕೊಡುವುತ್ತಾ ಮುಂದಕ್ಕೆ ಸಾಗಿಯೇ ಬಿಡುತ್ತದೆ. ಆಗ ಧಡಧಡನೇ ನೀರಿಗೆ ಹಲವು ಆಮೆಗಳು ಬಿದ್ದುಬಿಡುತ್ತವೆ. ಬೆನ್ನ ಮೇಲೆ ಉಳಿದ ಆಮೆಗಳು ಕೂಡ ಹರಸಾಹಸಪಡುತ್ತಾ ಇರುತ್ತವೆ.
ಹೆದ್ದಾರಿಗಳಲ್ಲಿ ಲಾರಿಗಳಿಗೆ ಕೈ ಅಡ್ಡ ಹಾಕಿ ಉಚಿತ ಲಿಫ್ಟ್ ಕೇಳುವವರು, ಚಾಲಕನ ಅಚಾತುರ್ಯದಿಂದ ಅಪಘಾತವಾದಾಗ ಮೃತಪಟ್ಟ ಅಥವಾ ಪ್ರಪಾತಕ್ಕೆ ಬಿದ್ದ ಸುದ್ದಿಗಳನ್ನು ಓದಿರುತ್ತೇವೆ. ಅದಕ್ಕೆ ಈ ವಿಡಿಯೊ ನಿದರ್ಶನವಾಗಿದೆ.