
ವೈದ್ಯರ ಶಿಫಾರಸಿನ ಪ್ರಕಾರ, ಮಧುಮೇಹವು ಗುಣಪಡಿಸಬಹುದಾದ ಸ್ಥಿತಿಯಲ್ಲ. ಒಬ್ಬರು ತಮ್ಮ ಆಹಾರದ ಬಗ್ಗೆ ಸರಿಯಾದ ಕಾಳಜಿಯನ್ನು ತೆಗೆದುಕೊಳ್ಳಬೇಕು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸರಿಯಾದ ರೀತಿಯ ಔಷಧಿಗಳನ್ನು ಹೊಂದಿರಬೇಕು.
ಮಧುಮೇಹದ ಆಹಾರದ ಭಾಗವಾಗಿ ಉತ್ತಮ ಪ್ರಮಾಣದ ಪ್ರೋಟೀನ್, ಫೈಬರ್, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ತೆಗೆದುಕೊಳ್ಳಬೇಕು. ಸಕ್ಕರೆ, ಹೆಚ್ಚಿನ ಕ್ಯಾಲೋರಿ ಆಹಾರಗಳನ್ನು ಸೇವಿಸಕೂಡದು. ಸಾಂಪ್ರದಾಯಿಕ ಮಸಾಲೆಗಳು ಮತ್ತು ಗಿಡಮೂಲಿಕೆಗಳು ಸಹ ಮಧುಮೇಹವನ್ನು ನಿರ್ವಹಿಸುವಲ್ಲಿ ಸಹಾಯಕವಾಗಿದೆ ಎಂದು ಹೇಳಲಾಗಿದೆ. ಅರಿಶಿನ ಕೂಡ ಮಧುಮೇಹ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಅರಿಶಿನದ ಆರೋಗ್ಯ ಪ್ರಯೋಜನಗಳು:
ಜನಪ್ರಿಯ ದೇಸಿ ಮಸಾಲೆ ಅರಿಶಿನವು ಹಿಂದಿನಿಂದಲೂ ಹಲವು ರೋಗಗಳಿಗೆ ರಾಮಬಾಣವಾಗಿ ಉಪಯೋಗವಾಗಿದೆ. ಇದು ಉತ್ಕರ್ಷಣ ನಿರೋಧಕ, ಆಂಟಿವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಒಳಗೊಂಡಿದೆ.
ಮಧುಮೇಹ ನಿರ್ವಹಣೆಗೆ ಅರಿಶಿನ ಚಹಾ ಕೂಡ ಸಹಕಾರಿಯಾಗಿದೆ. ಒಂದು ಕಪ್ ಅರಿಶಿನ ಚಹಾವನ್ನು ಸೇವಿಸುವುದು ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ತಯಾರಿಸುವ ಬಗೆ ಹೇಗೆ ಎಂಬುದು ಇಲ್ಲಿದೆ:
ರಾತ್ರಿ ವೇಳೆ ಅರ್ಧ ಇಂಚಿನ ಹಸಿ ಅರಿಶಿನವನ್ನು ಒಂದು ಲೋಟ ನೀರಿನಲ್ಲಿ ನೆನೆಸಿಡಿ. ನಂತರ ನೀರನ್ನು ಚೆನ್ನಾಗಿ ಕುದಿಸಿ. ಬಳಿಕ ತಣಿಸಿ ಕುಡಿಯಬೇಕು.
ಶುಂಠಿ ಮತ್ತು ಕರಿಮೆಣಸು ಒಳಗೊಂಡಿರುವ ಡಿಟಾಕ್ಸ್ ಅರಿಶಿನ ಚಹಾ ಕೂಡ ಸೇವಿಸಬಹುದು. ಈ ಆರೋಗ್ಯಕರ ಅರಿಶಿನ ಚಹಾವನ್ನು ಕುಡಿಯುವುದರಿಂದ ಮಧುಮೇಹ ನಿಯಂತ್ರಣದಲ್ಲಿಡಲು ಇದು ಮಹತ್ತರ ಪಾತ್ರ ನಿರ್ವಹಿಸುತ್ತದೆ. ಆದರೆ, ಅತಿಯಾದರೆ ಅಮೃತವೂ ವಿಷ ಎಂಬಂತೆ, ಮಿತವಾಗಿ ಸೇವಿಸುವುದು ಒಳ್ಳೆಯದು.