ಪೆಟ್ರೋಲ್-ಡೀಸೆಲ್, ದ್ವಿದಳ ಧಾನ್ಯಗಳು, ಈರುಳ್ಳಿ, ಎಣ್ಣೆ ನಂತ್ರ ಈಗ ಅರಿಶಿನದ ಬೆಲೆ ಆಕಾಶ ಮುಟ್ಟುತ್ತಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅರಿಶಿನದ ಸಗಟು ಬೆಲೆ ಕಳೆದ ಐದು ವರ್ಷಗಳಲ್ಲಿ ಗರಿಷ್ಠ ಮಟ್ಟವನ್ನು ತಲುಪಿದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆ ಆಗದಿರುವುದು ಇದಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಸರಕು ಮತ್ತು ಉತ್ಪನ್ನ ವಿನಿಮಯ ಕೇಂದ್ರದಲ್ಲಿ ಬುಧವಾರ ಮಧ್ಯಾಹ್ನ 12 ಗಂಟೆಗೆ ಅರಿಶಿನ ಬೆಲೆ ಕ್ವಿಂಟಲ್ಗೆ 7540 ರೂಪಾಯಿಯಾಗಿದೆ. ಆದರೆ ಮೇ ಭವಿಷ್ಯದಲ್ಲಿ ಈ ಬೆಲೆ ಕ್ವಿಂಟಲ್ಗೆ 8435 ರೂಪಾಯಿಗೆ ತಲುಪಿದೆ. ಕಳೆದ ಮೂರು ತಿಂಗಳಲ್ಲಿ ಅರಿಶಿನ ಬೆಲೆ ಕ್ವಿಂಟಲ್ಗೆ ಎರಡು ಸಾವಿರ ರೂಪಾಯಿಗಳವರೆಗೆ ಏರಿಕೆ ಕಂಡಿದೆ. ನವೆಂಬರ್ 2020 ರಲ್ಲಿ ಅರಿಶಿನ ಕ್ವಿಂಟಲ್ಗೆ 5770 ರೂಪಾಯಿಯಾಗಿತ್ತು.
ಹೊಸ ಬೆಳೆ ಬಂದರೂ ಬೆಲೆ ಏರಿಕೆ ನಿಲ್ಲುವುದಿಲ್ಲವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಮುಖ ಉತ್ಪಾದನಾ ರಾಜ್ಯವಾದ ತೆಲಂಗಾಣದಲ್ಲಿ ಅರಿಶಿನ ಬೆಳೆಯುವ ಪ್ರಮಾಣ ಕಡಿಮೆಯಾಗಿದೆ. ತೆಲಂಗಾಣ ಸರ್ಕಾರದ ಪ್ರಕಾರ, 2019-20ರಲ್ಲಿ 0.55 ಲಕ್ಷ ಹೆಕ್ಟೇರ್ನಲ್ಲಿ ಅರಿಶಿನವನ್ನು ಬೆಳೆದಿದ್ದರೆ 2020-21ರಲ್ಲಿ 0.41 ಲಕ್ಷ ಹೆಕ್ಟೇರ್ನಲ್ಲಿ ಅರಿಶಿನವನ್ನು ಬೆಳೆಯಲಾಗಿದೆ. ಕಳೆದ ಮೂರರಿಂದ ನಾಲ್ಕು ವರ್ಷಗಳಲ್ಲಿ ಅರಿಶಿನಕ್ಕೆ ಉತ್ತಮ ಬೆಲೆ ಸಿಗ್ತಿರಲಿಲ್ಲ. ಹಾಗಾಗಿ ಅನೇಕ ರೈತರು ಅರಿಶಿನ ಬಿಟ್ಟು ಸೋಯಾಬೀನ್ ಮತ್ತು ಹತ್ತಿ ಬೆಳೆ ಬೆಳೆಯಲು ಶುರು ಮಾಡಿದ್ದಾರೆ. ಅರಿಶಿನಕ್ಕೆ ಬೇಡಿಕೆ ಇದೇ ರೀತಿ ಇದ್ದಲ್ಲಿ ಏಪ್ರಿಲ್ ಮಧ್ಯದ ವೇಳೆಗೆ ಅರಿಶಿನ ಬೆಲೆ ಕ್ವಿಂಟಲ್ಗೆ 9,500 ರಿಂದ 10,000 ರೂಪಾಯಿ ತಲುಪಲಿದೆ ಎಂದು ಅಂದಾಜಿಸಲಾಗ್ತಿದೆ.