ಹಸುಗೂಸಿನ ಆರೈಕೆ ನಿಜಕ್ಕೂ ಸವಾಲಿನ ಕೆಲಸ. ಇಲ್ಲಿ ತಾಯಿ ಮತ್ತು ಮಗು ಇಬ್ಬರ ಆರೋಗ್ಯದ ಕಾಳಜಿ ಮಾಡಬೇಕಾಗುತ್ತದೆ. ಸ್ವಲ್ಪವೇ ಯಾಮಾರಿದರೂ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಬೇಕಾದೀತು. ಅದಕ್ಕಾಗಿ ಎಷ್ಟೋ ಮನೆಗಳಲ್ಲಿ ಬಾಣಂತಿ ಹಾಗೂ ಕೂಸಿನ ಆರೈಕೆಗೆ ಅಂತಲೇ ಒಬ್ಬರನ್ನು ನಿಯೋಜಿಸಲಾಗುತ್ತದೆ.
ತಾಯಿ ಹಾಲನ್ನಷ್ಟೆ ಕುಡಿಯುವ ಹಸುಗೂಸಿಗೆ ಶೀತ ಆಗದ ಹಾಗೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಏಕೆಂದರೆ ಒಂದು ವೇಳೆ ಮಗುವಿಗೆ ಶೀತ ಆಗಿ ಮೂಗು ಕಟ್ಟಿದರೆ ಅವು ಹಾಲು ಕುಡಿಯಲು ಸಾಧ್ಯವಾಗುವುದಿಲ್ಲ. ದೊಡ್ಡವರು ಮೂಗು ಕಟ್ಟಿದಾಗ ಬಾಯಲ್ಲಿ ಉಸಿರಾಡುವಂತೆ, ಎಳೆಯ ಕಂದಮ್ಮಗಳಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಕೂಸು ಸಾಕಷ್ಟು ಪ್ರಮಾಣದಲ್ಲಿ ಹಾಲು ಕುಡಿಯದೆ ಹೋಗಬಹುದು.
ದೊಡ್ಡವರಿಗೆ ನೆಗಡಿ ಎಂದರೆ ಕಿರಿಕಿರಿ ಅನ್ನಿಸಬೇಕಾದರೆ ಇನ್ನೂ ಹಸುಗೂಸಿನ ಪಾಡೇನು ? ಹೊಟ್ಟೆ ತುಂಬಾ ಹಾಲು ಕುಡಿಯದೆ, ಉಸಿರಾಡಲು ಕಷ್ಟ ಅನ್ನಿಸಿ ಒಂದೇ ಸಮನೆ ಅಳಬಹುದು. ರಚ್ಚೆ ಹಿಡಿಯಬಹುದು. ಅದಕ್ಕಾಗಿ ನೆಗಡಿ ಆಗದ ಹಾಗೆ ಜಾಗ್ರತೆ ವಹಿಸುವುದು ಉತ್ತಮ.
ಹಸುಗೂಸಿನ ತಲೆ ಸ್ನಾನ ಮಾಡಿಸಿದ ತಕ್ಷಣ ಮೃದುವಾಗಿ ಅದರ ತಲೆ ಒರೆಸಿ ನೆತ್ತಿಯ ಮೇಲೆ ಸ್ವಲ್ಪವೇ ಸ್ವಲ್ಪ ಅರಿಶಿನ ಹಾಕಿ. ಇದರಿಂದ ಮಗುವಿಗೆ ಶೀತ ಬಾಧಿಸದು. ಹೀಗೆ ಮಗುವಿಗೆ ವರ್ಷ ತುಂಬುವ ತನಕ ಮಾಡಿದರೆ ಶೀತದ ಸಮಸ್ಯೆಯನ್ನು ತಡೆಗಟ್ಟಬಹುದು.