ಪಾಕಿಸ್ತಾನದ ಸ್ನೇಹಿತ ರಾಷ್ಟ್ರ ಟರ್ಕಿ, ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸುತ್ತಿದೆ. ಹಿಂಸಾಚಾರವನ್ನು ಹರಡಲು ಟರ್ಕಿಯ ಅಧ್ಯಕ್ಷ ರೆಚಪ್ ತಯ್ಯಿಪ್ ಎರ್ಡೊಗನ್ ತನ್ನ ಸೈನಿಕರನ್ನು ಕಾಶ್ಮೀರಕ್ಕೆ ಕಳುಹಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಗ್ರೀಕ್ ಮಾಧ್ಯಮ ವರದಿ ಮಾಡಿದೆ.
ಟರ್ಕಿಯ ಬಾಡಿಗೆ ಸೈನಿಕರಾದ SADAT ಈಗ ಕಾಶ್ಮೀರದಲ್ಲಿ ಸಕ್ರಿಯವಾಗಲು ತಯಾರಿ ನಡೆಸುತ್ತಿದೆ ಎಂದು ಪೆಂಟಾಪೋಸ್ಟಾಗ್ಮಾದ ವರದಿಯಲ್ಲಿ ಹೇಳಲಾಗಿದೆ. ಟರ್ಕಿ ತನ್ನನ್ನು ಮಧ್ಯ ಏಷ್ಯಾದ ಪ್ರಮುಖ ಶಕ್ತಿ ಎಂದು ತೋರಿಸಲು ಬಯಸಿದೆ. ಹಾಗಾಗಿ ಪಾಕಿಸ್ತಾನದ ಜೊತೆಗೆ ಕಾಶ್ಮೀರದಲ್ಲಿ ಹಿಂಸಾಚಾರವನ್ನು ಹರಡಲು ಅದು ಸಂಚು ರೂಪಿಸುತ್ತಿದೆ. ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುವ ಪಾಕಿಸ್ತಾನದ ಎಲ್ಲ ಪ್ರಯತ್ನವನ್ನು ಭಾರತ ತಡೆದಿದೆ. ಪಾಕ್ ಭಯೋತ್ಪಾದಕರಿಗೆ ಭಾರತ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ. ಇಷ್ಟು ದಿನ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದ ಪಾಕಿಸ್ತಾನ ಈಗ ಟರ್ಕಿಯೊಂದಿಗೆ ತನ್ನ ಪ್ಲಾನ್ ರೂಪಿಸುತ್ತಿದೆ.
ಟರ್ಕಿಯ ಅಧ್ಯಕ್ಷ ರೆಚಪ್ ತಯ್ಯಿಪ್ ಎರ್ಡೊಗನ್, ಮಿಷನ್ ಕಾಶ್ಮೀರದ ಜವಾಬ್ದಾರಿಯನ್ನು SADATಗೆ ಹಸ್ತಾಂತರಿಸಿದ್ದಾರೆ. SADAT ನೇತೃತ್ವವನ್ನು ಎರ್ಡೊ ಅವರ ಮಿಲಿಟರಿ ಸಲಹೆಗಾರ ಅಡ್ನಾನ್ ತನ್ರೆವರ್ಡಿ ವಹಿಸಿದ್ದಾರೆ. ಅವರು ಕಾಶ್ಮೀರ ಮೂಲದ ಭಯೋತ್ಪಾದಕ ಸೈಯದ್ ಗುಲಾಮ್ ನಬಿ ಫೈ ಜೊತೆ ಸಂಪರ್ಕದಲ್ಲಿದ್ದಾರೆ.
ಕಾಶ್ಮೀರ ವಿರುದ್ಧ ಸಂಚು ರೂಪಿಸಲು ಭಯೋತ್ಪಾದಕ ಫೈ, ಅಮೆರಿಕಾದಲ್ಲಿ, ಅಮೆರಿಕನ್ ಕೌನ್ಸಿಲ್ ಆಫ್ ಕಾಶ್ಮೀರವನ್ನು ಸ್ಥಾಪಿಸಿದ್ದ. ಈ ಸಂಸ್ಥೆಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಹಣ ನೀಡಿದೆ. ಈ ಸಂಸ್ಥೆ ಈಗ ಕಾಶ್ಮೀರದಲ್ಲಿ ಟರ್ಕಿಯ ಸದತ್ ಮತ್ತು ಇಸ್ಲಾಮಿಕ್ ವರ್ಲ್ಡ್ ಎಂಬ ಎನ್‌ಜಿಒ ಸಹಯೋಗದೊಂದಿಗೆ ಸಂಚು ರೂಪಿಸುತ್ತಿದೆ.
ಜಿಹಾದಿಗಳಿಗೆ ತರಬೇತಿ ನೀಡಲು ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸಲು ಟರ್ಕಿ, ಸಿರಿಯಾ, ಲಿಬಿಯಾ ಸೇರಿದಂತೆ ಅನೇಕ ದೇಶಗಳಲ್ಲಿ ಕೆಲಸ ಮಾಡುವ ಬಾಡಿಗೆ ಸೈನಿಕರ ಗುಂಪನ್ನು SADAT ಎಂದು ಕರೆಯಲಾಗುತ್ತದೆ. ಮುಸ್ಲಿಂ ದೇಶಗಳ ಸಾವಿರಾರು ಹೋರಾಟಗಾರರನ್ನು ಒಟ್ಟುಗೂಡಿಸಿ ಇಸ್ಲಾಮಿಕ್ ಸೈನ್ಯವನ್ನು ರಚಿಸಲು SADAT ಪ್ರಯತ್ನಿಸುತ್ತಿದೆ.