ಟರ್ಕಿಯ ಮಾಫಿಯಾ ಡಾನ್ ಸೆದತ್ ಪೆಕರ್ ಎಂಬಾತ ಅಲ್ಲಿನ ಅಗ್ರ ರಾಜಕಾರಣಿಗಳ ವಿರುದ್ಧ ಕೊಲೆ, ಮಾದಕ ದ್ರವ್ಯಗಳ ಸಾಗಾಟ ಹಾಗೂ ವ್ಯಾಪಕ ಭ್ರಷ್ಟಾಚಾರದ ಆರೋಪ ಹೊರೆಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ಮಿಲಿಯನ್‌ಗಟ್ಟಲೇ ಜನರು ಅದನ್ನು ವೀಕ್ಷಿಸಿದ್ದಾರೆ.
ವೀಕ್ಷಕರ ಪೈಕಿ ಕ್ಯಾನ್ ಗುಮುಸ್ಬಾಸ್ ಹೆಸರಿನ ಡಿಜಿಟಲ್ ಮಾರ್ಕೆಟಿಂಗ್ ತಜ್ಞರೊಬ್ಬರಾಗಿದ್ದು, ತಮ್ಮ ಮನೆಯಿಂದಲೇ ಪೆಕರ್‌ನ ವಿಡಿಯೋಗಳನ್ನು ವೀಕ್ಷಿಸುತ್ತಾ ಬಂದಿದ್ದಾರೆ. 27 ವರ್ಷದ ಕ್ಯಾನ್, ಈ ಆರೋಪಗಳ ಸಂಬಂಧ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ.
“ಏನೂ ಮಾಡಲಿಲ್ಲವೆಂದರೆ, ಟರ್ಕಿ ಒಂದು ಪ್ರಜಾಪ್ರಭುತ್ವ ದೇಶವೆಂದು ಹೇಳುವುದೇ ತಲೆಹರಟೆ ಮಾತು ಎನಿಸಿಬಿಡುತ್ತದೆ” ಎಂದು ಕ್ಯಾನ್ ಹೇಳಿಕೊಂಡಿದ್ದಾರೆ.
ಪೆಕರ್ ಪೋಸ್ಟ್ ಮಾಡಿರುವ ಏಳು ವಿಡಿಯೋಗಳಿಗೆ ಇದುವರೆಗೂ 56 ಮಿಲಿಯನ್ ವೀವ್ಸ್ ಸಿಕ್ಕಿದ್ದು, ಟರ್ಕಿಯ ಸಾರ್ವಜನಿಕ ವಲಯದಿಂದ ನಾನಾ ರೀತಿಯ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಟರ್ಕಿಯ ಸಾಂಪ್ರದಾಯಿಕ ಮಾಧ್ಯಮಗಳು ಬಹುತೇಕ ಸರ್ಕಾರೀ ಹಿಡಿತದಲ್ಲಿರುವ ನಡುವೆ, ಸಾಮಾಜಿಕ ಜಾಲತಾಣದಲ್ಲಿ ಮಾಡಲಾದ ಈ ಸೆನ್ಸೇಷನಲ್ ಕ್ಲೇಮ್ ಭಾರೀ ವೈರಲ್ ಆಗಿದೆ.