ಫೆಬ್ರವರಿಯಲ್ಲಿ ಘಟಿಸಿದ ಭಾರೀ ಭೂಕಂಪನದ ಬಳಿಕ ಇದೀಗ ಪ್ರವಾಹದ ಪ್ರಕೋಪಕ್ಕೆ ಸಿಲುಕಿರುವ ಟರ್ಕಿಯಲ್ಲಿ ಭಾರೀ ಮಳೆಗೆ ಹೆದ್ದಾರಿಯೊಂದು ಕೊಚ್ಚಿ ಹೋಗಿರುವ ವಿಡಿಯೋ ವೈರಲ್ ಆಗಿದೆ.
ಇಲ್ಲಿನ ಬೊಜ಼ೋವಾ-ಹಿಲ್ವನ್ ಹೆದ್ದಾರಿಯ ಭಾಗವೊಂದು ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗುತ್ತಿರುವ ವಿಡಿಯೋವನ್ನು ಇಸ್ತಾಂಬುಲ್‌ನ ಮಾಧ್ಯಮ ಏಜೆನ್ಸಿ ಡೇಲಿ ಸಬಾ ಶೇರ್ ಮಾಡಿದೆ.
ಕಳೆದ ತಿಂಗಳ ಭೂಕಂಪನದಿಂದ ತತ್ತರಿಸಿದ್ದ ಟರ್ಕಿಯ ಎರಡು ಪ್ರಾಂತ್ಯಗಳಲ್ಲಿ ಈಗ ಭಾರೀ ಮಳೆಯಾಗುತ್ತಿದ್ದು, ಪ್ರವಾಹದ ಕಾರಣ 14 ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ಮನೆ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಇಲ್ಲಿನ ಸಾನ್ಲಿಯರ್ಫ ಎಂಬಲ್ಲಿ ಪ್ರವಾಹದಿಂದ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಐವರು ಸಿರಿಯನ್ನರ ದೇಹಗಳು ಅಪಾರ್ಟ್‌ಮೆಂಟ್ ಒಂದರ ಬೇಸ್ಮೆಂಟ್‌ನಲ್ಲಿ ಸಿಕ್ಕಿದ್ದು, ಅಂಡರ್‌ಪಾಸ್‌ನಲ್ಲಿ ಸಿಲುಕಿದ್ದ ವ್ಯಾನಿನಲ್ಲಿದ್ದ ಇಬ್ಬರು ಸೇರಿದ್ದಾರೆ.
ಫೆಬ್ರವರಿ 6 ರಂದು 7.8 ತೀವ್ರತೆಯ ಭೂಕಂಪನ ಸಂಭವವಿದ್ದ ಕಾರಣ ಟರ್ಕಿ ಹಾಗೂ ಸಿರಿಯಾದಲ್ಲಿ 52,000 ಮಂದಿ ಮೃತಪಟ್ಟಿದ್ದರು. ಟರ್ಕಿಯೊಂದರಲ್ಲೇ ಎರಡು ಲಕ್ಷಕ್ಕೂ ಅಧಿಕ ಸಂಖ್ಯೆಯ ಕಟ್ಟಡಗಳು ನೆಲಸಮಗೊಂಡಿವೆ.