ಟರ್ಕಿಯಲ್ಲಿ ಭೂಕಂಪನ ಸಂಭವಿಸಿದ ವೇಳೆ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಎರಡು ತಿಂಗಳ ಮಗುವೊಂದರ ರಕ್ಷಣೆ ಮಾಡಿದ್ದು ನಿಮಗೆ ನೆನಪಿದೆಯೇ? 7.8 ತೀವ್ರತೆಯ ಭೂಕಂಪನದ ವೇಳೆ ಈ ಮಗುವಿನ ತಾಯಿ ತೀರಿ ಹೋಗಿದ್ದಾರೆ ಎಂದು ಭಾವಿಸಲಾಗಿತ್ತು.
ಆದರೆ ಮಗುವಿನ ತಾಯಿ ಜೀವಂತವಿದ್ದಾರೆ ಎಂದು ಇದೀಗ ತಿಳಿದು ಬಂದಿದೆ. ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವ ಆಂಟನ್ ಗೆರಾಶ್ಕೆನೋ ಪೋಸ್ಟ್ ಮಾಡಿರುವ ಮಗುವಿನ ಚಿತ್ರಗಳು ನೆಟ್ಟಿಗರ ಕಣ್ಣುಗಳಲ್ಲಿ ಕಂಬನಿ ತರಿಸಿದ್ದವು. ಬೇರೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವಿನ ತಾಯಿ, 54 ದಿನಗಳ ಬಳಿಕ ತಮ್ಮ ಮಗುವನ್ನು ಕೂಡಿಕೊಂಡಿದ್ದಾರೆ.
“ಟರ್ಕಿಯಲ್ಲಿ ಭೂಕಂಪನವಾದ ಸಂದರ್ಭದಲ್ಲಿ 128 ಗಂಟೆಗಳ ಕಾಲ ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ದ ಮಗುವೊಂದರ ಚಿತ್ರವೊಂದನ್ನು ನೀವೆಲ್ಲಾ ಕಂಡಿದ್ದೀರಿ. ಮಗುವಿನ ತಾಯಿ ಮೃತಪಟ್ಟಿದ್ದರು ಎಂದು ವರದಿ ಮಾಡಲಾಗಿತ್ತು.
ಆದರೆ ತಾಯಿ ಈಗ ಜೀವಂತವಿದ್ದಾರೆ ಎಂದು ತಿಳಿದು ಬಂದಿದೆ! ಆಕೆಗೆ ಬೇರೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 54 ದಿನಗಳು ಹಾಗೂ ಡಿಎನ್‌ಎ ಪರೀಕ್ಷೆ ಬಳಿಕ ಇಬ್ಬರೂ ಈಗ ಜೊತೆಯಾಗಿದ್ದಾರೆ,” ಎಂದು ಆಂಟನ್ ತಿಳಿಸಿದ್ದಾರೆ.