ಕೊಪ್ಪಳ: ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ಗೇಟ್ ಮುರುದು ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿರುವ ಪರಿಣಾಮ ಅಪಾರ ಪ್ರಮಾಣದಲ್ಲಿ ನೀರು ಹೊರಹೋಗುತ್ತಿದೆ. ಇನ್ನೊಂದೆಡೆ ಗ್ರಾಮಸ್ಥರಲ್ಲಿ ಪ್ರವಾಹ ಭೀತಿ ಶುರುವಾಗಿದೆ. ಈ ಮಧ್ಯೆ ಡ್ಯಾಂ ನ ಹೊಸ ಕ್ರಸ್ಟ್ ಗೇಟ್ ನಿರ್ಮಾಣದ ಕೆಲಸ ತ್ವರಿತಗತಿಯಲ್ಲಿ ಸಾಗುತ್ತಿದೆ.
ಹೊಸಪೇಟೆಯ ಇಂಡಸ್ಟ್ರಿಯಲ್ ಏರಿಯಾದ ನಾರಾಯಣ ಇಂಜಿನಿಯರಿಂಗ್ ವರ್ಕ್ಸ್ ನಲ್ಲಿ ಹೊಸ ಕ್ರಸ್ಟ್ ಗೇಟ್ ಸಿದ್ಧವಾಗುತ್ತಿದ್ದು, 19.230 ಮೀಟರ್ ಉದ್ದ, 1.250ಮೀಟರ್ ಅಗಲ ಹಾಗೂ ದಪ್ಪದ ಕಬ್ಬಿಣದ ಗೇಟ್ ನಿರ್ಮಾಣವಾಗುತ್ತಿದೆ. ಹತ್ತುದಿನಗಳ ಒಳಗಾಗಿ ಗೇಟ್ ಅಳವಡಿಸಲು ಸಿದ್ಧತೆ ನಡೆಸಲಾಗಿದೆ.
ತುಂಗಭದ್ರಾ ಜಲಾಶಯದ ಹೊಸ ಕ್ರಸ್ಟ್ ಗೇಟ್ ನಿರ್ಮಾಣದ ಚಿತ್ರಣವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹೊಸಪೇಟೆಯ ನಾರಾಯಣ ಇಂಜಿನಿಯರ್ಸ್ ಗೆ ನಿನ್ನೆ ಭೇಟಿ ನೀಡಿ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ನಿರ್ಮಾಣದ ಪ್ರಗತಿ ಪರಿಶೀಲನೆ ನಡೆಸಿದೆ. ಈ ಸಂಬಂಧ ಸಚಿವರು, ಶಾಸಕರು ಹಾಗೂ ಇಂಜಿನಿಯರ್‌ಗಳ ಜೊತೆ ಸಭೆ ನಡೆಸಿದ್ದೇನೆ. ಗೇಟ್ ನಿರ್ಮಾಣ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆಯುತ್ತಿದ್ದು, ಸದ್ಯದಲ್ಲೇ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದೆ. ಕಳೆದ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಆಗಿದೆ. ರೈತರ ಬೆಳೆ ಉಳಿಸುವುದು ನಮ್ಮ ಮುಖ್ಯ ಆದ್ಯತೆಯಾಗಿದೆ. ಬೇರೆ ಜಲಾಶಯಗಳಲ್ಲಿ ಕ್ರಸ್ಟ್ ಗೇಟ್‌ಗೆ ಎರಡು ರೀತಿಯ ಸುರಕ್ಷತೆ ಇರುತ್ತದೆ. ತುಂಗಭದ್ರಾ ಗೇಟ್‌ಗೆ ಒಂದೇ ಚೈನ್ ಇದ್ದ ಕಾರಣ ಅದು ಮುರಿದು ಬಿದ್ದಿದೆ. ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಿ ತ್ವರಿತವಾಗಿ ಕಾಮಗಾರಿ ಮುಗಿಸಲಾಗುವುದು ಎಂದು ತಿಳಿಸಿದ್ದಾರೆ.