ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ 19ನೇ ಕ್ರಸ್ಟ್ ಗೇಟ್ ಮುರಿದು ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದ ಹಿನ್ನೆಲೆಯಲ್ಲಿ ಇದೀಗ ಹೊಸ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ.
ಮುರಿದು ಬಿದ್ದಿದ್ದ 19ನೇ ಗೇಟ್ ನಲ್ಲಿ ಎಲ್ಲಾ 5 ಸ್ಟಾಪ್ ಲಾಗ್ ಅಳವಡಿಕೆ ಯಶ್ಸ್ವಿಯಾಗಿದೆ. ಈ ಮೂಲಕ ಪೋಲಾಗುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗಿದೆ.
ಡ್ಯಾಂ ತಜ್ಞ ಕನ್ಹಯ್ಯ ನಾಯ್ಡು ನೇತೃತ್ವದ ತಂದ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸ್ಟಾಪ್ ಲಾಗ್ ಗೇಟ್ ಅಳವಡಿಸುವ ಕಾರ್ಯದಲ್ಲಿ ತೊಡಗಿತ್ತು. ಆಗಸ್ಟ್ 16ರಂದು ಮೊದಲ ಎಲಿಮೆಂಟ್ ಅಳವಡಿಸಲಾಗಿತ್ತು. ಇದೀಗ ಎಲ್ಲಾ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಮಾಡಲಾಗಿದೆ. ನೀರು ಪೋಲಾಗುತ್ತಿರುವುದು ಕೂಡ ನಿಂತಿದೆ. ಇನ್ನು ತುಂಗಭದ್ರಾ ಡಾಂ ನ ಎಲ್ಲಾ 33 ಗೇಟ್ ಗಳನ್ನು ಮುಚ್ಚಲಾಗಿದೆ ಎಂದು ಡ್ಯಾಂ ಮಂಡಳಿ ತಿಳಿಸಿದೆ.
ಗೇಟ್ ಅಳವಡಿಕೆ ಬಗ್ಗೆ ಪ್ರತಿಕ್ರಿಯಿಸಿದ ತಜ್ಞ ಕನ್ಹಯ್ಯ ನಾಯ್ಡು, ರೈತರ ಬದುಕು ಹಸನುಗೊಳಿಸಲು ನಾನು ಈ ಇಳಿಯವಸ್ಸಿನಲ್ಲಿಯೂ ಹೈದರಾಬಾದ್ ನಿಂದ ಇಲ್ಲಿಗೆ ಆಗಮಿಸಿ ಸ್ಟಾಪ್ ಲಾಗ್ ಗೇಟ್ ಅಳವಡಿಸಿದ್ದೇನೆ. ಹರಿಯುವ ನೀರಿನಲ್ಲಿ ಗೇಟ್ ಅಳವಡಿಕೆ ಸವಾಲಿನ ಕೆಲಸವಾಗಿತ್ತು. ಆದರೂ ನಮ್ಮ ಮನೆ ದೇವರಾದ ತಿರುಪತಿ ತಿಮ್ಮಪ್ಪನ ಆಶಿರ್ವಾದದಿಂದ ಯಶಸ್ಸು ಸಾಧಿಸಿದ್ದೇವೆ. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.