ಕೊಪ್ಪಳ: ತುಂಗಭದ್ರಾ ಡ್ಯಾಂ ನ 19ನೇ ಕ್ರಸ್ಟ್ ಗೇಟ್ ಮುರಿದುಬಿದ್ದು ಕೊಚ್ಚಿ ಹೋಗಿರುವ ಪರಿಣಾಮ ಗೇಟ್ ಅಳವಡಿಸುವ ಕಾರ್ಯ ಚುರುಕುಗೊಂಡಿರುವ ನಡುವೆಯೇ ಕೊಂಚ ಅಡ್ಡಿಯುಂಟಾಗಿದೆ.
ಹೊಸ ಸ್ಟಾಪ್ ಲ್ಯಾಗ್ ಗೇಟ್ ಅಳವಡಿಸಲು ತಜ್ಞರು ಹಾಗೂ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಗುರುವಾರ ಕ್ರೇನ್ ಮೂಲಕ ಗೇಟ್ ನ್ನು ಎತ್ತಿ ಎಲಿಮೆಂಟ್ ಅಳವಡಿಕೆಗೆ ಸಿಬ್ಬಂದಿ ಯತ್ನಿಸಿದ್ದಾರೆ. ಆದರೆ ಗೇಟ್ ನೊಳಗಡೆ ಸರಿಯಾಗಿ ಬಿಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ನಿನ್ನೆ ಗೇಟ್ ಅಳವಡಿಕೆ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಇಂದು ಮತ್ತೆ ಗೇಟ್ ಅಳವಡಿಕೆ ಕಾರ್ಯಾಚರಣೆ ಆರಂಭವಾಗಲಿದೆ.
ಡ್ಯಾಂ ತಜ್ಞ ಕನ್ಹಯ್ಯ ನಾಯ್ಡು ನೇತೃತ್ವದಲ್ಲಿ ನೂರಾರು ಸಿಬ್ಬಂದಿಗಳು ಪ್ರಾಣ ಪಣಕ್ಕಿಟ್ಟು ತುಂಗಭದ್ರಾ ಡ್ಯಾಂ ಗೇಟ್ ಅಳವಡಿಕೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಎರಡು ಕ್ರೇನ್ ಮೂಲಕ ಮೊದಲ ಎಲಿಮೆಂಟ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಒಟ್ಟು 5 ಸ್ಟಾಪ್ ಲ್ಯಾಗ್ ಗೇಟ್ ಅಳವಡಿಸಲು ತಜ್ಞರು ಮುಂದಾಗಿದ್ದಾರೆ. ಅಗತ್ಯವಿದ್ದರೆ ಇನ್ನೂ ಮೂರು ಗೇಟ್ ಅಳವಡಿಸಲಾಗುವುದು. ಕಾರ್ಯಾಚರಣೆ ಮುಗಿದ ಬಳಿಕ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ತಜ್ಞ ಕನ್ಹಯ್ಯ ತಿಳಿಸಿದ್ದಾರೆ.