ಕೊಪ್ಪಳ: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ ಆಗಿ ಅಪಾರ ಪ್ರಮಾಣದ ನೀರು ಹೊರಬರುತ್ತಿರುವ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ತುಂಗಭದ್ರಾ ಡ್ಯಾಂಗ್ ಗೆ ಭೇಟಿ ನೀಡಿದ್ದಾರೆ.
ಕೊಪ್ಪಳ ತಾಲೂಕಿನ ಮುನಿರಾಅಬಾದ್ ಬಳಿ ಇರುವ ತುಂಗಭದ್ರಾ ಡ್ಯಾಂ ನ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದ್ದು, ನದಿಪಾತ್ರದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ತುಂಗಭದ್ರಾ ಡ್ಯಾಂ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿಸಿಎಂ ಅವರಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಮತ್ತಿತರರು ಸಾಥ್ ನೀಡಿದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಮೂರು ರಾಜ್ಯಗಳಿಗೆ ಸೇರಿರುವ ನೀರನ್ನು ಹೇಗಾದರೂ ಮಾಡಿ ಉಳಿಸಿಕೊಂಡು ತುಂಗಭದ್ರಾ ಅಣೆಕಟ್ಟಿನ ಗೇಟನ್ನು ದುರಸ್ತಿ ಮಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ನೀರನ್ನು ಹೊರಗೆ ಬಿಡದ ಹೊರತು ಗೇಟ್ ದುರಸ್ತಿ ಮಾಡಲು ಸಾಧ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಆದ ಕಾರಣ ತಂತ್ರಜ್ಞರ ವರದಿಯ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಅಣೆಕಟ್ಟಿನ 1 ರಿಂದ 16 ನೇ ಗೇಟುಗಳನ್ನು ಸಿಡಬ್ಲ್ಯೂಸಿ ನಿರ್ವಹಣೆ ಮಾಡುತ್ತದೆ. 17 ರಿಂದ 32 ರವರೆಗಿನ ಜವಾಬ್ದಾರಿ ಕರ್ನಾಟಕ ಸರ್ಕಾರದ್ದಾಗಿದೆ. ಕೇಂದ್ರ ಜಲ ಆಯೋಗದವರು ಸಹ ಒಂದಷ್ಟು ತಂತ್ರಜ್ಞರನ್ನು ಕಳುಹಿಸಿದ್ದಾರೆ ಎಂದರು.