ಹೊಸಪೇಟೆ: ತುಂಗಭದ್ರಾ ಜಲಾಶಯ ಮತ್ತೆ ತುಂಬಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಾಗಿನ ಅರ್ಪಿಸಿದರು.
ಆಗಸ್ಟ್ 10ರಂದು ರಾತ್ರಿ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ನೀರಿನಲ್ಲಿ ಕೊಚ್ಚಿ ಹೋಗಿ ಅವಾಂತರ ಸಂಭವಿದ ಕಾರಣಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮ ಮುಂದೂಡಲಾಗಿತ್ತು. ಅಣೆಕಟ್ಟು ತಜ್ಞ ಕನ್ಹಯ್ಯ ನಾಯ್ಡು ನೇತೃತ್ವದ ತಂಡ ಹಾಗೂ ಸಿಬ್ಬಂದಿಗಳ ಸತತ ಪರಿಶ್ರಮದಿಂದಾಗಿ ವಾರದೊಳಗೆ ತಾತ್ಕಾಲಿಕ ಕ್ರಸ್ಟ್ ಗೇಡ್ ಅಳವಡಿಸಲಾಗಿತ್ತು. ಈ ಮೂಲಕ 30 ಟಿಎಂಸಿ ನೀರು ಪೋಲಾಗುವುದನ್ನು ತಪ್ಪಿಸಲಾಗಿತ್ತು.
ಇದೀಗ ಮತ್ತೆ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, 13 ಲಕ್ಷ ಎಕರೆಗೂ ಅಧಿಕ ಜಮೀನಿನಲ್ಲಿ ಕೃಷಿ ಕಾರ್ಯ ನಡೆಯುತ್ತಿದೆ. ಈ ಬಾರಿ ಎರಡು ಬೆಳೆಗಳಿಗೆ ನೀರು ಲಭ್ಯವಾಗುವ ನಿರೀಕ್ಷೆಯಿದೆ. ತುಂಗಭದ್ರಾ ಜಾಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.