‘ಧುಮ್ಮಿಕ್ಕುತ್ತಿರುವ ಹಾಲ್ನೊರೆಯಂತಹ ನೀರು, ಹಸಿರ ಸಿರಿ ನಡುವೆ ತಂಗಾಳಿಗೆ ಭೋರ್ಗರೆಯುತ್ತಿರುವ ಜಲಧಾರೆ’. ಇದು ಶಿವಮೊಗ್ಗ ಸಮೀಪದ ಗಾಜನೂರು ತುಂಗಾ ಡ್ಯಾಂನ ಚಿತ್ರಣ.
ಜಲಾಶಯದ 20 ಗೇಟ್ ಗಳನ್ನು ತೆರೆದು ನೀರನ್ನು ಹೊರ ಬಿಡಲಾಗುತ್ತಿದ್ದು, ಜಲಧಾರೆಯ ವೈಭವ ಕಣ್ತುಂಬಿಕೊಳ್ಳುವಂತಿದೆ.
ಮುಂಗಾರು ಮಳೆ ಆರಂಭವಾದ ಸಂದರ್ಭದಲ್ಲಿ ರಾಜ್ಯದಲ್ಲಿ ಭರ್ತಿಯಾಗುವ ಮೊದಲ ಜಲಾಶಯ ತುಂಗಾ ಡ್ಯಾಂ ಎಂದು ಹೇಳಲಾಗುತ್ತದೆ. ಅಂತೆಯೇ ಈ ಬಾರಿ ಮಳೆಯ ಬಗ್ಗೆ ಆತಂಕದಲ್ಲಿದ್ದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಡ್ಯಾಂ ಭರ್ತಿಯಾಗಿರುವುದು ಸಂತಸ ಮೂಡಿಸಿದೆ.
ಪಶ್ಚಿಮಘಟ್ಟ ಪ್ರದೇಶಗಳಲ್ಲಿ, ಶೃಂಗೇರಿ, ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಧಾರಾಕಾರ ಮಳೆಯಾಗಿದ್ದರಿಂದ ಜೂನ್ ಆರಂಭದಲ್ಲೇ ತುಂಗಾ ಜಲಾಶಯ ಭರ್ತಿಯಾಗಿದೆ. ಗೇಟ್ ಗಳಿಂದ ನೀರು ಧುಮ್ಮಿಕ್ಕುತ್ತಿದ್ದು, ಈ ದೃಶ್ಯ ವೈಭವ ಕಣ್ತುಂಬಿಕೊಳ್ಳುವಂತಿದೆ.