alex Certify ಎರಡು ಡ್ಯಾಂಗಳಿಂದ 1,44,468 ಕ್ಯೂಸೆಕ್ ನೀರು ಹೊರಕ್ಕೆ: ಅಪಾಯ ಮಟ್ಟಕ್ಕೇರಿದ ತುಂಗಾ ಭದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ಡ್ಯಾಂಗಳಿಂದ 1,44,468 ಕ್ಯೂಸೆಕ್ ನೀರು ಹೊರಕ್ಕೆ: ಅಪಾಯ ಮಟ್ಟಕ್ಕೇರಿದ ತುಂಗಾ ಭದ್ರಾ

ದಾವಣಗೆರೆ: ಮಲೆನಾಡಿನ ಭಾಗದಲ್ಲಿ ಸಾಕಷ್ಟು ಮಳೆಯಾಗುತ್ತಿರುವುದರಿಂದ ಭದ್ರಾ ಜಲಾಶಯ ಭರ್ತಿಯಾಗಿದೆ. ತುಂಗಾ ನದಿಯಿಂದಲೂ ಎಲ್ಲಾ ಕ್ರೆಸ್ಟ್ ಗೇಟ್‌ಗಳ ಮೂಲಕ ನೀರನ್ನು ನದಿಗೆ ಹೊರಬಿಡಲಾಗುತ್ತಿದ್ದು, ತುಂಗಭದ್ರಾ ನದಿಯಲ್ಲಿ 1,44,468 ಕ್ಯೂಸೆಕ್ ಗೆ ಏರಿಕೆಯಾಗಿದ್ದು, ಇದು ಅಪಾಯ ಮಟ್ಟವನ್ನು ತಲುಪಿರುವುದರಿಂದ ನದಿಪಾತ್ರದಲ್ಲಿನ ಜನರು ಎಚ್ಚರಿಕೆ ವಹಿಸಲು ತಿಳಿಸಲಾಗಿದೆ.

ತುಂಗಾ ನದಿಯಿಂದ 82053 ಮತ್ತು ಭದ್ರಾದಿಂದ 62415 ಕ್ಯೂಸೆಕ್ ನೀರು ಬರುತ್ತಿದ್ದು, ತುಂಗಭದ್ರಾ ನದಿಯಲ್ಲಿ ಒಂದೂವರೆ ಲಕ್ಷ ಕ್ಯೂಸೆಕ್ ವರೆಗೆ ನದಿಯಲ್ಲಿ ನೀರು ಹರಿಯುತ್ತಿದೆ. ಇದರಿಂದ ಹೊನ್ನಾಳಿ ಬಾಲರಾಜ್‌ಘಾಟ್, ಬಂಬೂ ಬಜಾರ್ ಪ್ರದೇಶದ ನದಿಪಾತ್ರದಲ್ಲಿನ ಮನೆಗಳಿಗೆ ನೀರು ಬರಲಿದೆ. ಇದಕ್ಕಾಗಿ ಅಂಬೇಡ್ಕರ್ ಭವನ ಇಲ್ಲಿ 20 ಕುಟುಂಬಗಳ 93 ಜನರು, ಗುರುಭವನದಲ್ಲಿ 6 ಕುಟುಂಬದ 27 ಜನರಿಗೆ ಕಾಳಜಿ ಕೇಂದ್ರ ತೆರೆದು ಪ್ರವಾಹಪೀಡಿತ ಪ್ರದೇಶದಿಂದ ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಮತ್ತು ಹರಿಹರದಲ್ಲಿನ ಗಂಗಾನಗರದಲ್ಲಿನ ಪ್ರವಾಹ ಉಂಟಾಗಬಹುದೆಂದು ಎಪಿಎಂಸಿಯಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ.

 ನದಿಗೆ ಇಳಿಯದಂತೆ ಎಚ್ಚರಿಕೆ, ಸನ್ನದ್ದವಾದ ಎಸ್‌ಡಿಆರ್‌ಎಫ್, ಅಗ್ನಿಶಾಮಕ ಪಡೆ;

ತುಂಗಭದ್ರಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಎಸ್.ಡಿ.ಆರ್.ಎಫ್ ಪಡೆ ಮತ್ತು ಅಗ್ನಿ ಶಾಮಕ ಇಲಾಖೆ ತಂಡವು ರಕ್ಷಣಾ ಪರಿಕರಗಳೊಂದಿಗೆ ಸನ್ನದ್ದವಾಗಿಡಲಾಗಿದೆ. ಮತ್ತು ನದಿಪಾತ್ರದಲ್ಲಿ ಜನ, ಜಾನುವಾರುಗಳು ನದಿಗೆ ಇಳಿಯದಂತೆ ಅಪಾಯಕಾರಿ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮತ್ತು ಗ್ರಾಮ ಮಟ್ಟದಲ್ಲಿನ ಟಾಸ್ಕ್ ಪೋರ್ಸ್ ಸಮಿತಿ ರಚನೆ ಮಾಡಿ ನದಿಪಾತ್ರದಲ್ಲಿನ ಎಲ್ಲಾ ಗ್ರಾಮಗಳಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಗ್ರಾಮಾಡಳಿತ ಅಧಿಕಾರಿಗಳು ಸೇರಿದಂತೆ ತಹಶೀಲ್ದಾರರು ಕಟ್ಟೆಚ್ಚರ ವಹಿಸಲು ಸೂಚನೆ ನೀಡಿ ನದಿಗೆ ಇಳಿಯದಂತೆ ಡಂಗೂರ ಹಾಗೂ ಮೈಕ್ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

 ಪಥ ಬದಲಿಸಲು ಸೂಚನೆ;

ನದಿ ಪ್ರವಾಹದಿಂದ ಕೆಲವು ರಸ್ತೆ ಸಂಪರ್ಕಗಳು ಕಡಿತವಾಗಿದ್ದು, ಇಲ್ಲಿ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಷೇಧಿತ ಮಾರ್ಗದ ಬದಲಾಗಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗಿದೆ. ಹೊನ್ನಾಳಿ ತಾಲ್ಲೂಕಿನ ವಿಜಯಪುರ-ಕೋಟೆಮಲ್ಲೂರು ರಸ್ತೆ ಬದಲಾಗಿ ಹಾರಕೆರೆ ರಸ್ತೆ, ಕಮ್ಮಾರಗಟ್ಟೆ-ಬೆನಕನಹಳ್ಳಿ ಬದಲಾಗಿ ಕೈಮರ ಕ್ಯಾಂಪ್ ರಸ್ತೆ, ಹರಿಹರ ತಾ; ನಂದಿಗುಡಿ-ಪತ್ಯಾಪುರ-ಉಕ್ಕಡಗಾತ್ರಿ ರಸ್ತೆ ಸೇತುವೆ ಮುಳುಗಡೆಯಾಗಿದ್ದು, ಇದರ ಬದಲಾಗಿ ನಂದಿಗುಡಿ-ತುಮ್ಮಿನಕಟ್ಟೆ ರಸ್ತೆ ಬಳಕೆಗೆ ಸೂಚಿಸಲಾಗಿದೆ.

 ಹೊನ್ನಾಳಿ ಬೇಸ್ ಸ್ಟೇಷನ್;

ಹೊನ್ನಾಳಿಯಲ್ಲಿ ತುಂಗಭದ್ರಾ ನದಿಯ ನೀರಿನ ಮಟ್ಟ ಅಳತೆಗೆ ಕೇಂದ್ರ ವಾಟರ್ ಬೋರ್ಡ್ನ ಬೇಸ್ ಸ್ಟೇಷನ್ ಇದ್ದು, ಇಲ್ಲಿ ಜುಲೈ 31 ರ ಸಂಜೆ 6 ಗಂಟೆ ವೇಳೆಗೆ 12.06 ಮೀಟರ್ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಇದು ಅಪಾಯ ಮಟ್ಟವಾಗಿದೆ. ಈ ಸ್ಟೇಷನ್‌ನಲ್ಲಿ 10.85 ಮೀಟರ್ ಹರಿವು ದಾಖಲಾದರೆ ಅಪಾಯದ ಮಟ್ಟ ಎಂದೇ ಪರಿಗಣಿಸಲಾಗುತ್ತದೆ. 12.57 ಮೀಟರ್ ದಾಖಲಾದರೆ ಪ್ರವಾಗ ಉಂಟಾಗಿ ಹಾನಿಯ ಮಟ್ಟವೆಂದು ಪರಿಗಣಿಸಲಾಗುತ್ತದೆ. ಪ್ರತಿ  ಗಂಟೆಗೆ ಇಲ್ಲಿನ ದಾಖಲೆಯಲ್ಲಿ ಪಡೆದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ.

 ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ ಸಹಾಯವಾಣಿ ಸ್ಥಾಪನೆ;

ಜಿಲ್ಲಾಧಿಕಾರಿಗಳ ಕಚೇರಿ 08192-234034, 1077, ಎಸ್‌ಡಿಆರ್‌ಎಫ್ ಘಟಕ, ದೇವರಬೆಳೆಕೆರೆ 7411308591, ದಾವಣಗೆರೆ ಅಗ್ನಿಶಾಮಕ ಇಲಾಖೆ 08192-258101, 112, ದಾವಣಗೆರೆ ಮಹಾನಗರ ಪಾಲಿಕೆ 08192-234444, 8277234444, ದಾವಣಗೆರೆ ತಾ; ಕಚೇರಿ 9036396101, ಹರಿಹರ 08192-272959, ಜಗಳೂರು 08196-227242, ಹೊನ್ನಾಳಿ 08188-252108, ನ್ಯಾಮತಿ 8073951245, ಚನ್ನಗಿರಿ 7892481962 ದೂರವಾಣಿ, ಮೊಬೈಲ್ ಸಂಖ್ಯೆಗೆ ಕರೆ ಮಾಡಲು ಕೋರಲಾಗಿದೆ.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಬುಧವಾರ ಹೊನ್ನಾಳಿಯ ಸಾಸ್ವೇಹಳ್ಳಿ, ಬಾಲರಾಜ್‌ಘಾಟ್, ಬಂಬೂ ಬಜಾರ್ ಪ್ರದೇಶಗಳಿಗೆ ಶಾಸಕರಾದ ಡಿ.ಜಿ.ಶಾಂತನಗೌಡ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಹಾಗೂ ವಿವಿಧ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪ್ರವಾಹದಿಂದ ತೊಂದರೆಯುಂಟಾಗುವ ಪ್ರದೇಶಗಳ ವೀಕ್ಷಣೆ ಮಾಡಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...