ತುಮಕೂರು: ಕೊಟ್ಟಿಗೆ ನಿರ್ಮಾಣಕ್ಕೆ ಲೋನ್ ಕೊಡದೇ ಗ್ರಾಮ ಪಂಚಾಯಿತಿ ಪಿಡಿಒ ಸತಾಯಿಸುತ್ತಿದ್ದಕ್ಕೆ ಬೇಸತ್ತ ರೈತರೊಬ್ಬರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ತುಮಕೂರಿನ ಸಾಸಲುಕುಂಟೆ ಗ್ರಾಮದಲ್ಲಿ ನಡೆದಿದೆ.
ಗೋಪಾಲಯ್ಯ ಎಂಬ ರೈತನಿಗೆ ಲೋನ್ ಕೊಡದೇ ಸಾಸಲುಕುಂಟೆ ಗ್ರಾಮ ಪಂಚಾಯಿತಿ ಪಿಡಿಒ ಸತಾಯಿಸುತ್ತಿದ್ದನಂತೆ. ಇದರಿಂದ ಬೇಸತ್ತ ರೈತ ದನಗಳನ್ನು ತಂದು ಗ್ರಾಮ ಪಂಚಾಯಿತಿ ಕಚೇರಿ ಒಳಗೆ ಕಟ್ಟಿ ಪ್ರತಿಭಟನೆ ನಡೆಸಿದ್ದಾರೆ.
ರೈತ ಗೋಪಾಲಯ್ಯ ನರೇಗಾ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ್ದರು. ಲೋನ್ ಗಾಗಿ ನಾಲ್ಕು ವರ್ಷಗಳಿಂದ ಗ್ರಾಮ ಪಂಚಾಯಿತಿಗೆ ಅಲೆದಾಡುತ್ತಿದ್ದರೂ ಲೋನ್ ನೀಡಿಲ್ಲ. ಸಾಸಲುಕುಂಟೆ ಪಿಡಿಒ ಕಳೆದ ನಾಲ್ಕು ವರ್ಷಗಳಿಂದ ಲೋನ್ ನೀಡದೇ ಪೀಡಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ರೈತ ಹಸುಗಳ ಸಮೇತ ಗ್ರಾಮ ಪಂಚಾಯಿತಿಗೆ ಬಂದು ಕಚೇರಿಯಲ್ಲಿಯೇ ದನ ಕಟ್ಟಿದ್ದಾರೆ.
ಪ್ರಭಾವಿಗಳಿಗಾದರೆ ಅವರ ಮನೆ ಬಾಗಿಲಿಗೆ ಹೋಗಿ ಸಹಾಯ ಮಾಡ್ತಾರೆ. ಬಿಲ್ ಕೊಡ್ತಾರೆ. ಬಡವರನ್ನು ವರ್ಷಾನುಗಟ್ಟಲೇ ಅಲೆದಾಡಿಸುತ್ತಾರೆ. ಲೋನ್ ಗಾಗಿ ಅಲೆದಾಡಿ ಬೇಸತ್ತು ಕಚೇರಿಗೆ ದನಗಳನ್ನು ಕರೆತಂದು ಪ್ರತಿಭಟನೆ ಮಾಡಿದ್ದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.