ಮಂಗಳೂರು: ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ತುಳು ಭಾಷೆಯನ್ನು ಘೋಷಣೆ ಮಾಡುವ ಸಂಬಂಧ ಅಧ್ಯಯನ ನಡೆಸಿ ಸೂಕ್ತ ಶಿಫಾರಸುಗಳೊಂದಿಗೆ ವರದಿ ನೀಡಲು ರಚಿಸಲಾಗಿರುವ ಡಾ. ಮೋಹನ್ ಆಳ್ವ ನೇತೃತ್ವದ ಸಮಿತಿ ಫೆಬ್ರವರಿ 18 ರೊಳಗೆ ವರದಿ ಸಲ್ಲಿಸಲು ಎಲ್ಲಾ ತಯಾರಿ ಮಾಡಿಕೊಂಡಿದೆ.
ಸಮಿತಿಯಲ್ಲಿ 9 ಮಂದಿ ಸದಸ್ಯರಿದ್ದಾರೆ. ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಲಾಗಿದ್ದು, ಸಮಿತಿಯ ಸದಸ್ಯರೊಂದಿಗೆ ವಿವಿಧ ವಿದ್ವಾಂಸರು, ಸಂಪನ್ಮೂಲ ವ್ಯಕ್ತಿಗಳ ಸಲಹೆ ಪಡೆಯಲಾಗುತ್ತಿದೆ. 2000 ವರ್ಷಗಳಷ್ಟು ಸುಧೀರ್ಘ ಇತಿಹಾಸದಲ್ಲಿ ಹಲವು ವಿಚಾರಗಳು ನಡೆದು ಹೋಗಿದ್ದು, ಇವೆಲ್ಲವನ್ನು ಸೇರಿಸಿ ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ಡಾ. ಮೋಹನ್ ಆಳ್ವ ಹೇಳಿದ್ದಾರೆ.
ಫೆಬ್ರವರಿ 12 ರಿಂದ 18 ರೊಳಗೆ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಸಂಬಂಧ ವರದಿ ಸಲ್ಲಿಸಲಾಗುವುದು ಎಂದು ಹೇಳಲಾಗಿದೆ.