ತುಳಸಿ ಗಿಡಕ್ಕೆ ಸಾಕಷ್ಟು ಧಾರ್ಮಿಕ ಮಹತ್ವವಿದೆ. ಹಾಗಾಗಿ ಪ್ರತಿ ಮನೆಯಲ್ಲೂ ತುಳಸಿ ಗಿಡ ಇದ್ದೇ ಇರುತ್ತದೆ. ಅದೇ ರೀತಿ ತುಳಸಿಯಿಂದ ಸಾಕಷ್ಟು ಆರೋಗ್ಯಕ್ಕೆ ಪ್ರಯೋಜನಗಳೂ ಇವೆ. ತುಳಸಿ ಚಹಾವನ್ನು ಕುಡಿಯುವುದರಿಂದ ಅನೇಕ ದೈಹಿಕ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.
ತುಳಸಿ ಎಲೆಗಳು ಆಂಟಿವೈರಸ್, ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ಉರಿಯೂತದ ವಿರುದ್ಧವೂ ಇದು ಹೋರಾಡಬಲ್ಲದು. ತುಳಸಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ರಂಜಕ, ಕ್ಯಾಲ್ಸಿಯಂ ಮುಂತಾದ ಪ್ರಮುಖ ಅಂಶಗಳು ಕಂಡುಬರುತ್ತವೆ. ಹಾಗಾಗಿಯೇ ತುಳಸಿ ಚಹಾ ಸೇವನೆ ಮಾಡುವಂತೆ ಆಯುರ್ವೇದ ತಜ್ಞರು ಸಲಹೆ ನೀಡುತ್ತಾರೆ.
ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಸಲು ತುಳಸಿ ಚಹಾವು ತುಂಬಾ ಪ್ರಯೋಜನಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ಜಂಕ್ ಫುಡ್‌ಗಳಿಗೆ ಮಾರು ಹೋಗುತ್ತಿದ್ದು, ಜೀರ್ಣಕ್ರಿಯೆಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ತುಳಸಿ ಚಹಾ ಸೇವನೆಯಿಂದ ಮಲವಿಸರ್ಜನೆ ಪ್ರಕ್ರಿಯೆ ಸುಲಭವಾಗುತ್ತದೆ. ಗ್ಯಾಸ್ ಸಮಸ್ಯೆ, ಭೇದಿ ಸಮಸ್ಯೆ, ಹೊಟ್ಟೆ ನೋವು, ಸೆಳೆತ, ಮಲಬದ್ಧತೆಯಿಂದಲೂ ಮುಕ್ತಿ ಪಡೆಯಬಹುದು.
ಉತ್ತಮ ನಿದ್ರೆಗೂ ತುಳಸಿ ಚಹಾ ಸೇವನೆ ಮಾಡಬಹುದು. ಜನರು ಒತ್ತಡ ಮತ್ತು ಆಧುನಿಕ ಜೀವನಶೈಲಿಯಿಂದಾಗಿ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಚೆನ್ನಾಗಿ ನಿದ್ದೆ ಬರಬೇಕೆಂದರೆ ತುಳಸಿ ಎಲೆಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿಕೊಂಡು ಕುಡಿಯಿರಿ. ಹೀಗೆ ಮಾಡುವುದರಿಂದ ನಿದ್ರಾಹೀನತೆ ದೂರವಾಗುತ್ತದೆ. ಸಕ್ಕರೆ, ಹಾಲು ಬೆರೆಸಿದ ಸಾಮಾನ್ಯ ಚಹಾ ಕುಡಿಯುವುದಕ್ಕಿಂತ ತುಳಸಿ ಟೀ ಕುಡಿಯುವುದು ಸೂಕ್ತ.