ತಿರುಪತಿ: ತಿರುಪತಿ ತಿರುಮಲದ ಗರ್ಭಗುಡಿ ಮೇಲಿನ ವಿಮಾನ ಗೋಪುರದ ಚಿನ್ನ ಲೇಪನ ಕಾರ್ಯಕ್ಕಾಗಿ ಗರ್ಭಗುಡಿ ಬಂದ್ ಮಾಡುವ ಕುರಿತಾಗಿ ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆಗಮ ಪಂಡಿತರ ಜೊತೆಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಟಿಟಿಡಿ ತಿಳಿಸಿದೆ.
ವಿಮಾನ ಗೋಪುರದ ಮೂರು ಅಂತಸ್ತಿನ ಆನಂದ ನಿಲಯದ ಚಿನ್ನದ ಲೇಪನ ಕಾರ್ಯಕ್ಕಾಗಿ ಗರ್ಭಗುಡಿ ಬಂದ್ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ.
ಫೆಬ್ರವರಿ 23ರಂದು ಮುಖ್ಯ ದೇಗುಲದ ಪಕ್ಕದಲ್ಲಿ ತಾತ್ಕಾಲಿಕ ಗರ್ಭಗುಡಿ ಬಾಲಾಲಯ ನಿರ್ಮಾಣ ಕಾರ್ಯ ಆರಂಭಿಸಲಾಗುವುದು, ದರ್ಶನದ ಮಾದರಿಯಲ್ಲಿ ಬದಲಾವಣೆ ಇರುವುದಿಲ್ಲ ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಹೇಳಿದ್ದರು. ಚಿನ್ನ ಲೇಪನ ಕಾರ್ಯ ಕೈಗೊಳ್ಳುವುದರಿಂದ ಸುಮಾರು ಎರಡು ತಿಂಗಳ ಕಾಲ ಗರ್ಭಗುಡಿ ಬಂದ್ ಮಾಡಿ ತಾತ್ಕಾಲಿಕ ಗರ್ಭಗುಡಿಯಲ್ಲಿ ಸ್ವಾಮಿಯ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಇನ್ನೂ ಈ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ಆಗಮ ಪಂಡಿತರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.