ನೋಟು ಅಮಾನ್ಯೀಕರಣದಿಂದಾಗಿ ಟಿಟಿಡಿ ಆಡಳಿತ ಮಂಡಳಿ ಇಕ್ಕಟ್ಟಿಗೆ ಸಿಲುಕಿದೆ. ಹಳೆಯ ನೋಟುಗಳನ್ನ ವಿನಿಮಯ ಮಾಡಿಕೊಳ್ಳುವ ವಿಚಾರದಲ್ಲಿ ನಮ್ಮಿಂದ ಯಾವುದೇ ಸಹಾಯ ನಿರೀಕ್ಷೆ ಮಾಡಬೇಡಿ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿಕೆ ನೀಡಿರುವ ಬೆನ್ನಲ್ಲೇ ಟಿಟಿಡಿ ಬರೋಬ್ಬರಿ 50 ಕೋಟಿ ರೂಪಾಯಿ ಮೌಲ್ಯದ ಹಳೆಯ ನೋಟುಗಳನ್ನ ಏನು ಮಾಡೋದು ಎಂದು ತಲೆಕೆಡಿಸಿಕೊಂಡಿದೆ.
ಈ ವಿಚಾರವಾಗಿ ಮಾತನಾಡಿದ ಟಿಟಿಡಿ ಅಧ್ಯಕ್ಷ ವೈ. ಸುಬ್ಬಾರೆಡ್ಡಿ, ಈ ಮಂಡಳಿಯ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ 2 ವರ್ಷದ ಅವಧಿಯಲ್ಲಿ ನಾನು ನಾಲ್ಕು ಬಾರಿ ಈ ವಿಚಾರವಾಗಿ ನಿರ್ಮಲಾ ಸೀತಾರಾಮನ್ ಬಳಿ ಮಾತನಾಡಿದ್ದೇನೆ. ಅವರು ಈ ಅಮಾನ್ಯೀಕರಣಗೊಂಡ ನೋಟುಗಳನ್ನ ವಿನಿಮಯ ಮಾಡಿಕೊಳ್ಳಲು ನಿಮಗೆ ಅವಕಾಶ ನೀಡಿದ್ದಲ್ಲಿ ಇದರಿಂದ ನಾವು ಅನ್ಯ ಸಂಸ್ಥೆಗಳಿಗೂ ಈ ರೀತಿ ಮಾಡಲು ಅವಕಾಶ ನೀಡಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದು ಹೇಳಿದ್ದಾರೆ ಅಂತಾ ಮಾಹಿತಿ ನೀಡಿದ್ರು.
2016ರಲ್ಲಿ ಕೇಂದ್ರ ಸರ್ಕಾರವು ಹಳೆಯ 500 ಹಾಗೂ 1000 ರೂಪಾಯಿ ನೋಟುಗಳನ್ನ ಬ್ಯಾನ್ ಮಾಡಿತ್ತು. ಆದರೆ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಭಕ್ತರು ಕಾಣಿಕೆ ರೂಪದಲ್ಲಿ 1000 ರೂಪಾಯಿ 1.8 ಲಕ್ಷ ನೋಟುಗಳು (18 ಕೋಟಿ ರೂ. ಮೌಲ್ಯ) ಹಾಗೂ 500 ರೂಪಾಯಿಯ 6.34 ಲಕ್ಷ ನೋಟು(31.7 ಕೋಟಿ ರೂಪಾಯಿ ಮೌಲ್ಯ)ಗಳು ಸೇರಿವೆ. ಇವೆಲ್ಲ ಭಕ್ತರ ಕಾಣಿಕೆ ಆಗಿರೋದ್ರಿಂದ ಈ ಹಣಗಳನ್ನ ನಾಶ ಮಾಡಲು ದೇವಸ್ಥಾನದ ಆಡಳಿತ ಮಂಡಳಿಯ ಮನಸ್ಸು ಒಪ್ಪುತ್ತಿಲ್ಲ. ಈ ನೋಟುಗಳ ಭವಿಷ್ಯ ಏನಾಗಬಹುದು ಎಂದು ನಮಗೆ ತಿಳಿದಿಲ್ಲ. ನಾನು ರಿಸರ್ವ್ ಬ್ಯಾಂಕ್ ಬಳಿಯೂ ಈ ವಿಚಾರವಾಗಿ ಮಾತನಾಡಿದ್ದೇವೆ. ಇದು ಭಕ್ತರ ಹಣ. ಹಾಗಾಗಿ ಇವುಗಳನ್ನ ನಾಶ ಮಾಡೋದು ಸುಲಭದ ಕೆಲಸವೇನಲ್ಲ ಎಂದು ಸುಬ್ಬಾರೆಡ್ಡಿ ಆತಂಕ ವ್ಯಕ್ತಪಡಿಸಿದ್ರು.