ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಇನ್ನು ಮುಂದೆ ಸರತಿ ಸಾಲಿನಲ್ಲಿ 20 ರಿಂದ 30 ಗಂಟೆ ಕಾಯುವ ಸಂಕಷ್ಟ ತಪ್ಪಲಿದೆ. ಕೇವಲ ಮೂರು ಗಂಟೆಯೊಳಗೆ ಸಾರ್ವಜನಿಕರಿಗೆ ದರ್ಶನ ಕಲ್ಪಿಸಲು ದೇವಾಲಯದ ಆಡಳಿತ ಮಂಡಳಿ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಭಕ್ತರಿಗೆ ಕೇವಲ ಮೂರು ಗಂಟೆಯೊಳಗೆ ಶೀಘ್ರ ದರ್ಶನ ಕಲ್ಪಿಸಲು ವಿವಿಐಪಿ ದರ್ಶನ ಮೊಟಕುಗೊಳಿಸಲಾಗುವುದು. ಈ ಮೊದಲು ಜಾರಿಯಲ್ಲಿದ್ದ ಕೈಗೆ ಬ್ಯಾಡ್ಜ್ ಹಾಕುವ ಪದ್ಧತಿ ಮರು ಜಾರಿ ಮಾಡಲಾಗುವುದು. ಸ್ಲಾಟ್ ಗಳ ಸಂಖ್ಯೆಯನ್ನು ಹೆಚ್ಚಳ ಮಾಡುವುದು ಸೇರಿದಂತೆ ಅನೇಕ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಕಾಲ್ನಡಿಗೆಯಲ್ಲಿ ಸನ್ನಿಧಾನಕ್ಕೆ ಬರುವ ಭಕ್ತರಿಗೆ ದಿವ್ಯ ದರ್ಶನವನ್ನು ಮರು ಜಾರಿಗೊಳಿಸಲು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ನೇತೃತ್ವದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೆ, ತಿರುಮಲದಲ್ಲಿರುವ ಅನ್ಯ ಧರ್ಮೀಯ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾಯಿಸಿ ಹಿಂದೂಗಳಿಗೆ ಮಾತ್ರ ಅವಕಾಶ ಕಲ್ಪಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.