ತಿರುಪತಿ: ಸಾಮಾನ್ಯ ಯಾತ್ರಾರ್ಥಿಗಳಿಗೆ ವೈಕುಂಠ ದ್ವಾರ ದರ್ಶನಕ್ಕೆ ಅವಕಾಶ ಕಲ್ಪಿಸಲು ತಿರುಮಲ ತಿರುಪತಿ ದೇವಸ್ಥಾನ ಸಮಿತಿ(ಟಿಟಿಡಿ) ಜನವರಿ 2 ರಿಂದ 11 ರವರೆಗೆ ಇತರ ಎಲ್ಲಾ ರೀತಿಯ ವಿಶೇಷ ದರ್ಶನಗಳನ್ನು ರದ್ದು ಮಾಡಿದೆ.
ಶನಿವಾರ ತಿರುಮಲದಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ವೈಕುಂಠ ಏಕಾದಶಿ ದ್ವಾರ ದರ್ಶನದ ವ್ಯವಸ್ಥೆಗಳನ್ನು ಪರಿಶೀಲಿಸಿದ ಟಿಟಿಡಿ ಇಒ ಎ.ವಿ. ಧರ್ಮಾ ರೆಡ್ಡಿ, 2023 ರ ಜನವರಿ 2 ರಂದು ವೈಕುಂಠ ಏಕಾದಶಿ ಮತ್ತು ಜನವರಿ 3 ರಂದು ವೈಕುಂಠ ಏಕಾದಶಿಯ ಶುಭ ದಿನ ಬರುತ್ತದೆ. ಜನವರಿ 11ರವರೆಗೆ ದ್ವಾರ ದರ್ಶನ ಇರಲಿದೆ ಎಂದು ತಿಳಿಸಿದರು.
ತಿರುಪ್ಪಾವೈ, ಧನುರ್ಮಾಸಂ ಕೈಂಕರ್ಯಮ್ಸ್ ಮುಂತಾದ ಮುಂಜಾನೆಯ ಆಚರಣೆಗಳ ನಂತರ, ಸಾಮಾನ್ಯ ಯಾತ್ರಾರ್ಥಿಗಳಿಗೆ ದರ್ಶನ 5 ಗಂಟೆಗೆ ಪ್ರಾರಂಭವಾಗುತ್ತದೆ. ಒಂದು ದಿನದಲ್ಲಿ ಸುಮಾರು 80,000 ಯಾತ್ರಾರ್ಥಿಗಳಿಗೆ ದರ್ಶನ ನೀಡಲಾಗುವುದು. ಶ್ರೀವಾಣಿ, 300 ರೂ. ಟಿಕೆಟ್ ಗಳು ಮತ್ತು ಎಸ್‌ಎಸ್‌ಡಿ ಟೋಕನ್ ಹೊಂದಿರುವ ಭಕ್ತರಿಗೆ ‘ಮಹಾ ಲಘು ದರ್ಶನ’(ಜಯ-ವಿಜಯದಿಂದ) ಪಾಯಿಂಟ್ ಮಾತ್ರ ನೀಡಲಾಗುತ್ತದೆ ಎಂದು ಹೇಳಿದರು.
ದೇವಾಲಯದ ಸಂಸ್ಥೆಯು ಈ ಹತ್ತು ದಿನಗಳವರೆಗೆ ಆನ್ ಲೈನ್ ಮೋಡ್‌ನಲ್ಲಿ ದಿನಕ್ಕೆ 25,000 ರಂತೆ 300 ರೂ.ನ ವಿಶೇಷ ಪ್ರವೇಶ ದರ್ಶನದ 2.50 ಲಕ್ಷ ಟಿಕೆಟ್‌ಗಳನ್ನು ಬಿಡುಗಡೆ ಮಾಡುತ್ತದೆ. ತಿರುಪತಿಯಲ್ಲಿ ಒಂಬತ್ತು ಹಾಗೂ ತಿರುಮಲದಲ್ಲಿ ಒಂದರಂತೆ ಹತ್ತು ಸ್ಥಳಗಳಲ್ಲಿ ಪ್ರತಿ ದಿನ 50,000 ಟೋಕನ್ ಗಳೊಂದಿಗೆ ಒಟ್ಟು ಐದು ಲಕ್ಷ ಸ್ಲಾಟೆಡ್ ಸರ್ವ ದರ್ಶನ ಟಿಕೆಟ್‌ಗಳನ್ನು ನೀಡಲಾಗುತ್ತದೆ. ನಕಲು ತಪ್ಪಿಸಲು ಟಿಕೆಟ್ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ.
ಈ ಹತ್ತು ದಿನಗಳಲ್ಲಿ ಪ್ರತಿದಿನ 2,000 ಶ್ರೀವಾಣಿ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಸ್ವಯಂ-ಪ್ರೊಟೊಕಾಲ್ ವಿಐಪಿಗಳಿಗೆ ಮಾತ್ರ ದರ್ಶನ ಟಿಕೆಟ್‌ಗಳನ್ನು ನೀಡಲಾಗುವುದು. ವೈಕುಂಠ ಏಕಾದಶಿಗೆ ಯಾವುದೇ ಶಿಫಾರಸು ಪತ್ರಗಳನ್ನು ನೀಡಲಾಗುವುದಿಲ್ಲ. ಹೊಸ ವರ್ಷ, ವೈಕುಂಠ ಏಕಾದಶಿ ಮತ್ತು ದ್ವಾದಶಿ ಹಿನ್ನೆಲೆಯಲ್ಲಿ ವಸತಿ ಸೌಕರ್ಯಗಳ ಮುಂಗಡ ಬುಕಿಂಗ್ ಅನ್ನು ಡಿಸೆಂಬರ್ 29 ರಿಂದ ಜನವರಿ 3 ರವರೆಗೆ ರದ್ದುಗೊಳಿಸಲಾಗುತ್ತದೆ.