ಪೆಸಿಫಿಕ್ ಸಾಗರದ ತಳದಲ್ಲಿ ಲಾವಾರಸ ಸ್ಫೋಟಗೊಂಡ ಪರಿಣಾಮ ದ್ವೀಪ ದೇಶ ಟೋಂಗಾದಲ್ಲಿ ಸುನಾಮಿ ಭೀತಿ ಆವರಿಸಿದ್ದು, ಎಲ್ಲೆಡೆ ಎಚ್ಚರಿಕೆ ವಹಿಸಲಾಗಿದೆ. ನ್ಯೂಜಿಲೆಂಡ್ ಹಾಗೂ ಅಮೆರಿಕದ ಅನೇಕ ಭಾಗಗಳಲ್ಲೂ ಸಹ ಸುನಾಮಿ ಕಟ್ಟೆಚ್ಚರ ವಹಿಸಲಾಗಿದೆ.
ಲಾವಾರಸದ ದಟ್ಟ ಹೊಗೆ ಆಗಸವೆಲ್ಲಾ ಆವರಿಸಿದ್ದು, ಸುತ್ತಲಿನ ಗ್ರಾಮಗಳಲ್ಲಿ ಪ್ರಬಲ ಅಲೆಗಳನ್ನು ಹೊರಡಿಸಿದೆ. ಈ ದೃಶ್ಯಾವಳಿಯ ವಿಡಿಯೋಗಳು ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶನಿವಾರದಂದು, ಪ್ರದೇಶದಲ್ಲಿ ಭಾರೀ ಗುಡುಗು ಮತ್ತು ಮಿಂಚು ಸಹಿತ ಮಳೆಯಾದ ಕಾರಣ ಜಲಾಂತರಾಳದ ಜ್ವಾಲಾಮುಖಿ ಹುಂಗಾ ಟೊಂಗಾ-ಹುಂಗಾ ಹಾ’ಅಪಾಯ್ ಚಿಮ್ಮಿದೆ.
ಜ್ವಾಲಾಮುಖಿ ಚಿಮ್ಮುವು ದೃಶ್ಯಗಳನ್ನು ಉಪಗ್ರಹದ ಕ್ಯಾಮೆರಾಗಳು ಸೆರೆ ಹಿಡಿದಿದ್ದು, ಭಾರೀ ಬೂದಿ, ಹಬೆ ಮತ್ತು ಅನಿಲಗಳು ಸುತ್ತಲಿನ 20 ಕಿಮೀಗಳಷ್ಟು ಗಾಳಿಯನ್ನು ಆವರಿಸಿವೆ. ಕಳೆದ ಡಿಸೆಂಬರ್ 20ರಂದು ಘಟಿಸಿದ್ದಕ್ಕಿಂತ ಏಳು ಪಟ್ಟು ಬಲಶಾಲಿಯಾದ ಜ್ವಾಲಾಸ್ಫೋಟ ಇದಾಗಿದೆ ಎಂದು 10 ನ್ಯೂಸ್ ವರದಿ ಮಾಡಿದೆ.