ಪೂರ್ವ ಟಿಮೋರ್ ಕರಾವಳಿಯಲ್ಲಿ ಇಂದು 6.1 ತೀವ್ರತೆಯ ಭೂಕಂಪನ ಉಂಟಾಗಿದೆ. ಈ ಬಗ್ಗೆ ಯುಎಸ್ ಜಿಯೋಲಾಜಿಕಲ್ ಸರ್ವೆ ವರದಿ ಮಾಡಿದ ನಂತರ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಭೂಕಂಪದಿಂದಾಗಿ ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಸುನಾಮಿ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. USGS ಪ್ರಕಾರ, ಪೂರ್ವ ಟಿಮೋರ್ ಮತ್ತು ಇಂಡೋನೇಷ್ಯಾ ನಡುವೆ ಇರುವ ಟಿಮೋರ್ ದ್ವೀಪದ ಪೂರ್ವದಲ್ಲಿ 51.4 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ. ಇದರ ಬೆನ್ನಲ್ಲೇ ಹಿಂದೂ ಮಹಾಸಾಗರದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಪೂರ್ವ ಟಿಮೋರ್ ಪೆಸಿಫಿಕ್ ರಿಂಗ್ ಆಫ್ ಫೈರ್ ನಲ್ಲಿದೆ. ಇದು ಆಗಾಗ ಭೂಕಂಪಗಳಿಗೆ ಗುರಿಯಾಗುತ್ತದೆ.
ಫೆಬ್ರವರಿಯಲ್ಲಿ ಇಂಡೋನೇಷ್ಯಾದ ಉತ್ತರ ಸುಮಾತ್ರದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿ ಒಂದು ಡಜನ್ ಜನ ಸಾವನ್ನಪ್ಪಿದರು. 2004 ರಲ್ಲಿ 9.1 ತೀವ್ರತೆಯ ಭೂಕಂಪದಿಂದ ಸುನಾಮಿ ಉಂಟಾಗಿ ಸುಮಾತ್ರಾ ತೀರವನ್ನು ಅಪ್ಪಳಿಸಿ ಇಂಡೋನೇಷ್ಯಾದಲ್ಲಿ ಸುಮಾರು 1,70,000 ಸೇರಿದಂತೆ ಈ ಪ್ರದೇಶದಾದ್ಯಂತ 2,20,000 ಜನ ಸಾವಿಗೀಡಾಗಿದ್ದರು.