ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ನಲ್ಲಿ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಮಗುವಿಗೆ ಜೀವನಪರ್ಯಂತ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಲು ಸಾರಿಗೆ ಸಂಸ್ಥೆ ನಿರ್ಧರಿಸಿದೆ.
ಬುಡಕಟ್ಟು ಜನಾಂಗದ ಮಹಿಳೆ ಮಾಧವಿ ರತ್ನಾಲ ಎಂಬವರು ಭಾನುವಾರದಂದು ಉತ್ನೂರಿನಿಂದ ಮಹಾರಾಷ್ಟ್ರದ ಚಂದ್ರಪುರಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರಿಗೆ ಗುಡಿಹತ್ನೂರು ಮಂಡಲದ ಮಂಕಪುರ ಗ್ರಾಮದ ಬಳಿ ಹೆರಿಗೆ ನೋವು ಕಾಣಿಸಿಕೊಂಡಿದೆ.
ಪರಿಸ್ಥಿತಿಯನ್ನು ಅರಿತ ಚಾಲಕ ಹಾಗೂ ನಿರ್ವಾಹಕ ಬಸ್ ನಿಲ್ಲಿಸಿದ್ದು, ಕೆಲ ಮಹಿಳೆಯರ ಸಹಕಾರದಿಂದ ಮಾಧವಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ಅವರನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದೆ. ಅದಿಲಾಬಾದ್ TSRTC ಡಿಪೋ ಮ್ಯಾನೇಜರ್ ವಿಜಯ್ ಮತ್ತು ಡಿವಿಜನಲ್ ಮ್ಯಾನೇಜರ್ ಮಧುಸೂದನ್, ಮಾಧವಿ ಅವರನ್ನು ಅಭಿನಂದಿಸಿ ಹಣ್ಣನ್ನು ನೀಡಿದ್ದಾರೆ. ಜೊತೆಗೆ ಮಗುವಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಮಾಹಿತಿಯನ್ನು ತಿಳಿಸಿದ್ದಾರೆ.