ಚಹಾ, ಕಾಫಿ ತಯಾರಿಸುವುದರಿಂದ ಆರಂಭಿಸಿ ಅಡುಗೆ ಮನೆಯಲ್ಲಿ ಹಲವು ವಿಧದಲ್ಲಿ ಸಕ್ಕರೆಯನ್ನು ಬಳಸುವ ಬದಲು ಕಲ್ಲುಸಕ್ಕರೆಯನ್ನು ಉಪಯೋಗಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ?
ಹವಾಮಾನ ಸ್ವಲ್ಪ ಬದಲಾದರೂ ಮಕ್ಕಳು ಕೆಮ್ಮುವದಕ್ಕೆ ಆರಂಭಿಸುತ್ತಾರೆ. ಇಂಥ ಸಂದರ್ಭದಲ್ಲಿ ಸಿರಪ್ ಕುಡಿಸುವ ಬದಲು ಕಾಳುಮೆಣಸಿನ ಪುಡಿಗೆ ಜೇನು ಹಾಗೂ ಕಲ್ಲುಸಕ್ಕರೆ ಸೇರಿಸಿ ತಿನ್ನಿಸಿ. ಒಂದೆರಡು ದಿನಗಳಲ್ಲಿ ಕೆಮ್ಮಿನ ಸಮಸ್ಯೆ ದೂರವಾಗುತ್ತದೆ.
ಮಕ್ಕಳ ಹೊರತಾಗಿ ದೊಡ್ಡವರಿಗೆ ಒಣಕೆಮ್ಮಿನ ಸಮಸ್ಯೆ ಕಾಡುತ್ತಿದ್ದರೆ ಒಂದು ತುಂಡು ಕಲ್ಲುಸಕ್ಕರೆಯನ್ನು ಬಾಯಿಯಲ್ಲಿ ಹಾಕಿ ಇಟ್ಟುಕೊಂಡರೆ ಸಾಕು. ಗಂಟಲು ನೋವಿಗೆ ಕಲ್ಲುಸಕ್ಕರೆಯ ಪುಡಿಗೆ ತುಸು ತುಪ್ಪ ಹಾಗೂ ಕಾಳು ಮೆಣಸಿನ ಪುಡಿ ಸೇರಿಸಿ ಕಲಸಿ ತಿನ್ನಿ.
ಹೋಟೆಲ್ ಗಳಲ್ಲಿ ಸೋಂಪು ಜೊತೆ ಕಲ್ಲುಸಕ್ಕರೆಯನ್ನೂ ಸೇರಿಸಿ ಇಟ್ಟಿರುವುದನ್ನು ನೀವು ಕಂಡಿರಬಹುದು. ಇದರಲ್ಲಿ ಜೀರ್ಣಕಾರಿ ಗುಣವಿದೆ ಎಂಬುದೇ ಇದಕ್ಕೆ ಕಾರಣ. ಹಾಗಾಗಿ ಇದನ್ನು ಬಾಯಿಯಲ್ಲಿ ಹಾಕಿ ಇಟ್ಟುಕೊಂಡರೆ ಜೀರ್ಣ ಸಂಬಂಧಿ ಸಮಸ್ಯೆಗಳಿಂದಲೂ ಮುಕ್ತಿ ಪಡೆಯಬಹುದು.