ಚೆನ್ನೈ: ಲಾಕ್ಡೌನ್ ಸಂದರ್ಭದಲ್ಲಿ ಅಗತ್ಯ ಸರಕು ಸಾಗಿಸುವ ಲಾರಿಗಳ ನಿರ್ವಹಣೆಗೆ ಆಯ್ದ ಗ್ಯಾರೇಜ್, ಮೆಕಾನಿಕ್ ಶಾಪ್ ಗಳನ್ನು ತೆರೆಯಲು ಅನುಮತಿ ನೀಡಬೇಕೆಂದು ತಮಿಳುನಾಡು ಲಾರಿ ಮಾಲೀಕರ ಸಂಘಗಳು ಒತ್ತಾಯಿಸಿವೆ.
ಶೇಕಡ 20 ರಷ್ಟು ಟ್ರಕ್ ಗಳು ಅಗತ್ಯ ವಸ್ತುಗಳಾದ ಅಕ್ಕಿ, ಹಾಲು, ಅಡುಗೆ ಅನಿಲ ಸಿಲಿಂಡರ್, ಗೋಧಿ, ತರಕಾರಿ, ಹೂವು, ಹಣ್ಣು, ಇತರೆ ದಿನಸಿ ವಸ್ತುಗಳನ್ನು ಸಾಗಿಸುವಲ್ಲಿ ನಿರತವಾಗಿವೆ. ವಾಹನಗಳು ದುರಸ್ತಿಗೆ ಬಂದ ಸಂದರ್ಭದಲ್ಲಿ ಮೆಕಾನಿಕ್ ಅಂಗಡಿಗಳ ಕೊರತೆಯಿಂದ ಸರಿಪಡಿಸಲು ಸಾಧ್ಯವಾಗದೇ ತೊಂದರೆಯಾಗಿದೆ ಎಂದು ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಮುರುಗನ್ ವೆಂಕಟಾಚಲಂ ಅವರು ದೂರಿದ್ದಾರೆ.
ಈ ಕುರಿತಂತೆ ಮುಖ್ಯ ಕಾರ್ಯದರ್ಶಿಗೆ ಅವರು ಮನವಿ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರದ ಅನುಮೋದನೆಯ ಹೊರತಾಗಿಯೂ ಮೆಕಾನಿಕ್ ಶಾಪ್ ಗಳು ಕಾರ್ಯನಿರ್ವಹಿಸಲು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸರಕುಗಳನ್ನು ಇಳಿಸಿದ ನಂತರ ಖಾಲಿ ಟ್ರಕ್ ಗಳಲ್ಲಿ ಗೋದಾಮಿಗೆ ಹಿಂದಿರುಗುವ ಸಮಯದಲ್ಲಿ ಚಾಲಕರು ಪೊಲೀಸರಿಂದ ತೊಂದರೆ ಅನುಭವಿಸುವಂತಾಗಿದೆ ಎಂದು ಅವರು ದೂರಿದ್ದಾರೆ. ಅಗತ್ಯ ವಸ್ತು ಸಾಗಿಸುವ ಲಾರಿಗಳ ದುರಸ್ತಿಗೆ ಗ್ಯಾರೇಜ್, ವರ್ಕ್ ಶಾಪ್, ಮೆಕಾನಿಕ್ ಶಾಪ್ ಮತ್ತು ಬಿಡಿಭಾಗಗಳ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದಾರೆ.