ನವದೆಹಲಿ: ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಅಖಿಲ ಭಾರತ ಮೋಟಾರ್ ಟ್ರಾನ್ಸ್ ಪೋರ್ಟ್ ಕಾಂಗ್ರೆಸ್(ಎಐಎಂಟಿಸಿ) ಪ್ರತಿನಿಧಿಗಳನ್ನು ಮಂಗಳವಾರ ಭೇಟಿಯಾಗಿ ಅವರ ಬೇಡಿಕೆಗಳ ಕುರಿತು ಚರ್ಚಿಸಿದ್ದಾರೆ. ಸಭೆಯ ನಂತರ ಸಾರಿಗೆ ನೌಕರರು ತಮ್ಮ ಕೆಲಸವನ್ನು ತಕ್ಷಣವೇ ಪುನರಾರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಮಾತನಾಡಿ, ನಾವು ಅಖಿಲ ಭಾರತ ಮೋಟಾರ್ ಟ್ರಾನ್ಸ್ ಪೋರ್ಟ್ ಕಾಂಗ್ರೆಸ್ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ್ದೇವೆ. ಹೊಸ ನಿಯಮವನ್ನು ಇನ್ನೂ ಜಾರಿಗೆ ತಂದಿಲ್ಲ. ಇದನ್ನು ಸರ್ಕಾರ ಒಪ್ಪಿಕೊಂಡಿದೆ. ಭಾರತೀಯ ನ್ಯಾಯ ಸಂಹಿತಾ 106/2 ಅನ್ನು ಜಾರಿಗೊಳಿಸುವ ಮೊದಲು ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್ ಪೋರ್ಟ್ ಕಾಂಗ್ರೆಸ್ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸುತ್ತೇವೆ. ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಭಾರತೀಯ ನ್ಯಾಯ್ ಸಂಹಿತಾ ಅಡಿಯಲ್ಲಿ ಹಿಟ್ ಅಂಡ್ ರನ್ ಅಪಘಾತ ಪ್ರಕರಣಗಳಿಗೆ ಹೊಸ ಕಠಿಣ ಜೈಲು ಶಿಕ್ಷೆಯ ನಿಬಂಧನೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೇಶದ ವಿವಿಧೆಡೆ ಚಾಲಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿ ಪ್ರತಿಭಟನೆ ನಡೆಸಲಾಗಿತ್ತು. ಅನೇಕ ರಾಜ್ಯಗಳಲ್ಲಿ ಸಾರಿಗೆ ಸೇವೆಯಲ್ಲಿ ವ್ಯತ್ಯಯವಾಗಿತ್ತು.