ಬೆಂಗಳೂರು: ಹಿಟ್ ಅಂಡ್ ರನ್ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ಜನವರಿ 17 ರಿಂದ ಲಾರಿ ಮಾಲೀಕರು ಮುಷ್ಕರ ಕೈಗೊಂಡಿದ್ದಾರೆ. ಕೇಂದ್ರದಿಂದ ಸ್ಪಷ್ಟ ಭರವಸೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗಿದ್ದು, ಪೆಟ್ರೋಲ್, ಹಾಲು, ನೀರು ಸಾಗಣೆ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ.
ಹಿಟ್ ಅಂಡ್ ರನ್ ಪ್ರಕರಣದಲ್ಲಿ ಲಾರಿ ಚಾಲಕರಿಗೆ 10 ವರ್ಷ ಜೈಲು ಶಿಕ್ಷೆ, 7 ಲಕ್ಷ ರೂಪಾಯಿ ದಂಡ ವಿಧಿಸುವ ಕಾನೂನು ಜಾರಿ, ಸಾರಿಗೆ ಇಲಾಖೆಯಿಂದ ಲಾರಿ ಮಾಲೀಕರಿಗೆ ಆಗುತ್ತಿರುವ ಕಿರುಕುಳದ ವಿರುದ್ಧ ಫೆಡರೇಶನ್ ಆಫ್ ಕರ್ನಾಟಕ ಲಾರಿ ಮಾಲೀಕರ ಸಂಘ ಜನವರಿ 17 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನ ಕೈಗೊಂಡಿದೆ.
ಕಾನೂನು ಜಾರಿಗೆ ಮುಂದಾಗಿದ್ದನ್ನು ವಿರೋಧಿಸಿ ಉತ್ತರದ ಭಾರತದ ವಿವಿಧ ರಾಜ್ಯಗಳಲ್ಲಿ ಲಾರಿ ಮಾಲೀಕರು ಮುಷ್ಕರ ಕೈಗೊಂಡ ಹಿನ್ನೆಲೆಯಲ್ಲಿ ಕಾನೂನು ಜಾರಿ ಮಾಡುವುದರಿಂದ ಹಿಂದೆ ಸರಿದಿರುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಘೋಷಣೆ ಮಾಡಿದೆ. ಈ ಬಗ್ಗೆ ಸ್ಪಷ್ಟ ಆದೇಶ ಪ್ರಕಟಿಸಬೇಕು ಎಂದು ಒತ್ತಾಯಿಸಿ ಫೆಡರೇಶನ್ ಆಫ್ ಕರ್ನಾಟಕ ಲಾರಿ ಮಾಲೀಕರ ಸಂಘ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಮುಷ್ಕರದ ಸಂದರ್ಭದಲ್ಲಿ ಪೆಟ್ರೋಲಿಯಂ ಉತ್ಪನ್ನ, ಹಾಲು, ನೀರು ಪೂರೈಕೆ ಲಾರಿ ಹೊರತುಪಡಿಸಿ ಉಳಿದ ಸರಕು ಸಾಗಣೆ ಲಾರಿಗಳನ್ನು ಸ್ಥಗಿತಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ.