ಬೆಂಗಳೂರು: ಹಿಟ್ ಅಂಡ್ ಪ್ರಕರಣಗಳಲ್ಲಿ ಚಾಲಕರಿಗೆ ಕಠಿಣ ಶಿಕ್ಷೆ, ದಂಡ ವಿಧಿಸಲು ಭಾರತೀಯ ನ್ಯಾಯ ಸಂಹಿತೆಯಲ್ಲಿ ಅವಕಾಶ ನೀಡಿರುವುದನ್ನು ವಿರೋಧಿಸಿ ಜನವರಿ 17 ರಿಂದ ಕರೆ ನೀಡಲಾಗಿರುವ ಲಾರಿ ಮುಷ್ಕರಕ್ಕೆ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರುಗಳ ಸಂಘ ಬೆಂಬಲ ನೀಡದಿರಲು ತೀರ್ಮಾನ ಕೈಗೊಂಡಿದೆ.
ಸಂಘದ ರಾಜ್ಯಾಧ್ಯಕ್ಷ ಜಿ.ಆರ್. ಷಣ್ಮುಖಪ್ಪ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಕೆಲವರಿಗೆ ಹೊಸ ಕಾನೂನಿನ ಬಗ್ಗೆ ತಪ್ಪು ಮಾಹಿತಿ ಇದ್ದು, ಪ್ರಚಾರದ ಗೀಳಿನಿಂದ ಮುಷ್ಕರಕ್ಕೆ ಕರೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂಘದ ಜೊತೆಗೆ 27 ಲಕ್ಷ ಚಾಲಕರು ಗುರುತಿಸಿಕೊಂಡಿದ್ದಾರೆ. ಮುಷ್ಕರಕ್ಕೆ ನಮ್ಮ ಯಾವುದೇ ಬೆಂಬಲ ಇಲ್ಲ. ಯಾವುದೇ ವಾಹನ ಸೇವೆ ಸ್ಥಗಿತಗೊಳಿಸುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಹೊಸ ಕಾನೂನಿನ ಬಗ್ಗೆ ಗೃಹ ಸಚಿವಾಲಯದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಕಾನೂನಿನ ಆತಂಕಕಾರಿ ಪರಿಸ್ಥಿತಿ ವಿವರಿಸಿ ಕೆಲ ನಿಬಂಧನೆ ಹಿಂಪಡೆಯಲು ತಿಳಿಸಲಾಗಿದೆ. ಗೃಹ ಇಲಾಖೆ ಅಧಿಕಾರಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಹೊಸ ಕಾನೂನಿನ ಬಗ್ಗೆ ತಪ್ಪು ಮಾಹಿತಿ ನೀಡಿ ಕೆಲವರು ಚಾಲಕರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ.