ತಿರುವನಂತಪುರಂ: ಭಗವಾನ್ ಶ್ರೀ ಕೃಷ್ಣ ತುಳಸಿ ಪ್ರಿಯನಾಗಿದ್ದರೂ ಕೇರಳದ ತ್ರಿಶೂರಿನಲ್ಲಿರುವ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇವಾಲಯದಲ್ಲಿ ತುಳಸಿ ನಿಷೇಧಿಸಲಾಗಿದೆ.
ತುಳಸಿ ಬೆಳೆಯುವಾಗ ಕೀಟನಾಶಕವನ್ನು ಹೆಚ್ಚಾಗಿ ಬಳಕೆ ಮಾಡುತ್ತಿರುವುದರಿಂದ ಶ್ರೀ ಕೃಷ್ಣ ದೇವಾಲಯದಲ್ಲಿ ತುಳಸಿ ನಿಷೇಧಿಸಲಾಗಿದೆ. ತುಳಸಿಯನ್ನು ಬಳಕೆ ಮಾಡುತ್ತಿದ್ದ ದೇವಾಲಯದ ಸಿಬ್ಬಂದಿ ಅಲರ್ಜಿ, ತುರಿಕೆ ಮತ್ತಿತರ ಸಮಸ್ಯೆಗಳ ಬಗ್ಗೆ ಆಗಾಗ ದೂರುತ್ತಿದ್ದರು. ಇದರಿಂದ ದೇವಾಲಯದ ಆಡಳಿತ ಮಂಡಳಿಯು ತುಳಸಿ ಬಳಕೆ ಮಾಡದಂತೆ ಭಕ್ತರಿಗೆ ಸಲಹೆ ನೀಡಿದೆ.
ಕೀಟನಾಶಕ ರಹಿತವಾಗಿ ಬೆಳೆದ ತುಳಸಿಯನ್ನು ಮಾತ್ರ ಪೂಜೆಗೆ ಪಡೆಯಲಾಗುವುದು. ವಾಣಿಜ್ಯ ಉದ್ದೇಶದಿಂದಲೂ ತುಳಸಿ ಬೆಳೆಯುತ್ತಿದ್ದು, ಹೆಚ್ಚಾಗಿ ಕೀಟನಾಶಕ ಬಳಸಲಾಗುತ್ತಿದೆ. ಹೆಚ್ಚು ದಿನ ಸಂರಕ್ಷಿಸಿ ಇಡಲು ಕೂಡ ಕ್ರಿಮಿನಾಶಕವನ್ನು ಬಳಕೆ ಮಾಡುತ್ತಿದ್ದು, ಅಂಗಡಿಗಳಲ್ಲಿ ಸಿಗುವ ಇಂತಹ ತುಳಸಿಯನ್ನು ಬಹುತೇಕ ಭಕ್ತರು ಖರೀದಿಸಿ ಪೂಜೆಗೆ ಅರ್ಪಿಸುತ್ತಿದ್ದಾರೆ. ಇದನ್ನು ನಿರಂತರವಾಗಿ ಬಳಕೆ ಮಾಡುವ ಸಿಬ್ಬಂದಿ ಅನಾರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ದೇವಾಲಯದಲ್ಲಿ ಕೀಟನಾಶಕ ಸಿಂಪಡಿಸಿ ಬೆಳೆದ ತುಳಸಿ ಬಳಕೆಯನ್ನು ನಿಷೇಧಿಸಲಾಗಿದೆ.