ರೈತರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದ ಚಿರತೆಯನ್ನು ಸಾರ್ವಜನಿಕರ ಗುಂಪು ಹಿಡಿದು ಸಾಯಿಸಿದ್ದು, ಈ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನಲ್ಲಿ ನಡೆದಿತ್ತು. ಇದೀಗ ಈ ದೃಶ್ಯಾವಳಿಯ ವಿಡಿಯೋ ತುಣುಕುಗಳನ್ನು ಆಧರಿಸಿ ಅರಣ್ಯ ಇಲಾಖೆ, ಚಿರತೆ ಕೊಂದವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.
ಘಟನೆಯ ವಿವರ: ದೇವದುರ್ಗ ತಾಲೂಕಿನ ಕಂಬದಾಳ ಗ್ರಾಮದ ಹೊರವಲಯದ ಗುಡ್ಡದಲ್ಲಿ ಪ್ರತ್ಯಕ್ಷವಾಗಿದ್ದ ಈ ಚಿರತೆ ಮೂವರು ರೈತರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಇದರಿಂದ ಆಕ್ರೋಶಗೊಂಡು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಚಿರತೆ ಹುಡುಕಿಕೊಂಡು ತೆರಳಿದ್ದಾರೆ.
ಬಳಿಕ ಗುಡ್ಡದ ಕಲ್ಲು ಬಂಡೆಗಳ ಮಧ್ಯೆ ಅಡಗಿದ್ದ ಈ ಚಿರತೆಯನ್ನು ಪತ್ತೆ ಹಚ್ಚಿ ಅದರ ಮೇಲೆ ಕಲ್ಲಿನಿಂದ ದಾಳಿ ನಡೆಸಿದ್ದಾರೆ. ಅಂತಿಮವಾಗಿ ಅದನ್ನು ಹಿಡಿದು ಹೊರತಂದಿದ್ದು, ಅಷ್ಟರಲ್ಲಾಗಲೇ ಅದು ಮೃತಪಟ್ಟಿತ್ತು.
ಮೃತ ಗಂಡು ಚಿರತೆಯನ್ನು ಈಗ ಮರಣೋತ್ತರ ಪರೀಕ್ಷೆಗಾಗಿ ದೇವದುರ್ಗ ಪಶು ಆಸ್ಪತ್ರೆಗೆ ರವಾನಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ದೃಶ್ಯಾವಳಿ ಆಧರಿಸಿ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.