ಬೆಂಗಳೂರು: ಮುಡಾ ಹಗರಣ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಬದಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ಕೋರಿರುವ ಅರ್ಜಿಯ ಆರೋಪಗಳ ಕುರಿತು ವಿವರಣೆ ನೀಡುವಂತೆ ರಾಜ್ಯಪಾಲ ಥಾವರಚಂದ್ ಗೆಹ್ಲೊಟ್ ಅವರು ಸಿಎಂ ಸಿದ್ದರಾಮಯ್ಯನವರಿಗೆ ನೋಟಿಸ್ ನೀಡಿದ್ದಾರೆ. ಜುಲೈ 27ರಂದು ನೋಟಿಸ್ ಕಳುಹಿಸಲಾಗಿದೆ.
ಸರ್ಕಾರದಿಂದ ವರದಿ ಕೇಳಿದ ರಾಜ್ಯಪಾಲರ ಕ್ರಮದಿಂದಾಗಿ ರಾಜ್ಯ ರಾಜಕಾರಣದಲ್ಲಿ ತಲ್ಲಣ ಶುರುವಾಗಿದ್ದು, ಸಿಎಂ ಸಿದ್ದರಾಮಯ್ಯನವರಿಗೆ ಪ್ರಾಸಿಕ್ಯೂಷನ್ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರಿಗೆ ವರದಿ ನೀಡುವ ಬಗ್ಗೆ ಚರ್ಚೆ ನಡೆಸಲಾಗುವುದು. ಪ್ರಾಸಿಕ್ಯೂಷನ್ ಮನವಿ ತಿರಸ್ಕರಿಸುವಂತೆ ಶಿಫಾರಸು ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಇದರ ನಡುವೆಯೇ ರಾಜ್ಯ ರಾಜಕಾರಣದಲ್ಲಿ ಆಂತರಿಕ ಬೆಳವಣಿಗೆ ಬಿರುಸುಗೊಂಡಿದೆ. ಶಾಸಕ ಯತಿಂದ್ರ ಸಿದ್ದರಾಮಯ್ಯ ನಿನ್ನೆಯೇ ನಂಜನಗೂಡಿನ ಖಾಸಗಿ ಕ್ರಮದಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ನಿಗದಿಯಂತೆ ಇಂದು ಸಂಜೆ ಅವರು ಬೆಂಗಳೂರಿಗೆ ಆಗಮಿಸಬೇಕಿತ್ತು. ನಿನ್ನೆ ರಾತ್ರಿ ಸಚಿವ ಜಾರ್ಜ್ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಚಿವರು, ಶಾಸಕರೊಂದಿಗೆ ಆಂತರಿಕ ಸಭೆ ನಡೆಸಿದ್ದಾರೆ. ಚರ್ಚೆಯ ವೇಳೆ ಸಚಿವ ಪರಮೇಶ್ವರ ಕೂಡ ಭಾಗಿಯಾಗಿದ್ದಾರೆ.
ಇಂದು ಸಂಪುಟ ಸಭೆ ಹೊರತುಪಡಿಸಿ ಮುಖ್ಯಮಂತ್ರಿಗಳು ಬೇರೆ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಸಿಎಂ ವಿರುದ್ಧದ ರಾಜಕೀಯ ಅನುಮತಿ ವಿರೋಧಿಸಿ ಇಂದಿನ ಸಂಪುಟ ಸಭೆಯಲ್ಲಿ ನಿರ್ಣಯ ಅಂಗೀಕರಿಸುವ ಸಾಧ್ಯತೆ ಇದೆ. ಸಂಪುಟ ಸಭೆ ಬಳಿಕ ದಿನದ ಬಾಕಿ ಸಮಯವನ್ನು ಸಿಎಂ ಕಾಯ್ದಿರಿಸಿದ್ದಾರೆ. ಕ್ಷಿಪ್ರ ರಾಜಕೀಯ ಬೆಳವಣಿಗೆಯ ಬಗ್ಗೆ ಮುಖ್ಯಮಂತ್ರಿಗಳ ಆಪ್ತ ಬಳಗ ಅಂದಾಜಿಸುತ್ತಿದೆ. ಮುಂದಿನ ಎರಡು ದಿನಗಳಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.