ಹರ್ಯಾಣ ಹಿಂಸಾಚಾರದ ವಿಚಾರದಲ್ಲಿ ನಟ ಗೋವಿಂದ ಹೆಸರಿನ ಟ್ವೀಟರ್ ವೈರಲ್ ಆಗಿದ್ದು, ಸಾಕಷ್ಟು ಪರ ವಿರೋಧದ ಅಭಿಪ್ರಾಯ ಕೇಳಿಬಂದಿದೆ. ಇದಾದ ಬಳಿಕ ಗೋವಿಂದ ತಮ್ಮಟ್ವೀಟರ್ ಖಾತೆಯನ್ನೇ ನಿಷ್ಕ್ರಿಯ ಗೊಳಿಸಿದ್ದಾರೆ.
ಅಷ್ಟೇ ಅಲ್ಲದೇ ತಮ್ಮ ಟ್ವಿಟರ್ ಅನ್ನು ಹ್ಯಾಕ್ ಮಾಡಲಾಗಿದೆ, ನಾನು ಯಾವುದೇ ಟ್ವೀಟ್ ಮಾಡಿಲ್ಲ ಎಂದು ಇನ್ಸ್ಟಾಗ್ರಾಮ್ನಲ್ಲಿ ಅಪ್ಡೇಟ್ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸೈಬರ್ ಕ್ರೈಮ್ ಸೆಲ್ಗೆ ದೂರು ನೀಡುವುದಾಗಿ ಅವರು ತಿಳಿಸಿದ್ದಾರೆ. @govindaahuja21 ರಿಂದ ಪೋಸ್ಟ್ ಮಾಡಿದ ಟ್ವೀಟ್ ಗುರುಗ್ರಾಮ್ನಲ್ಲಿ ಗುಂಪು ಹಿಂಸಾಚಾರದ ಕುರಿತು ಕಾಮೆಂಟ್ ಮಾಡಲಾಗಿತ್ತು.
ಈ ಟ್ವೀಟರ್ ಹ್ಯಾಂಡಲ್ ವೆರಿಫೈ ಮಾಡಿಲ್ಲ ಮತ್ತು ಬಹಳ ಕಾಲದಿಂದ ಬಳಸಿಲ್ಲ ಎಂದು ಗೋವಿಂದ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹೇಳಿದ್ದಾರೆ.
“ದಯವಿಟ್ಟು ಹರಿಯಾಣ ಘಟನೆ ಕುರಿತ ಟ್ವೀಟ್ ಮುಂದಿಟ್ಟುಕೊಂಡು ನನ್ನ ಮೇಲೆ ಆರೋಪ ಮಾಡಬೇಡಿ. ನಾನು ಆ ಟ್ವೀಟ್ ಮಾಡಿಲ್ಲ. ಯಾರೋ ನನ್ನ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ. ನಾನು ಈಗ ಸೈಬರ್-ಕ್ರೈಮ್ಗೆ ದೂರು ನೀಡುತ್ತಿದ್ದೇನೆ” ಎಂದು ಗೋವಿಂದ ಹೇಳಿದ್ದಾರೆ.
“ಚುನಾವಣೆ ಸಮಯ ಸಮೀಪಿಸುತ್ತಿರುವಾಗ, ಕೆಲವರು ನಾನು ಸ್ಪರ್ಧೆ ಮಾಡುತ್ತೇನೆ ಎಂದು ಈ ರೀತಿ ಟ್ವೀಟ್ ಮಾಡಿರಬಹುದು. ಆದರೆ ನಾನು ಅಂತಹ ವಿಷಯಗಳನ್ನು ಎಂದಿಗೂ ವ್ಯಕ್ತಪಡಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಗೋವಿಂದ ಅವರ ಟ್ವಿಟರ್ ಖಾತೆಯು ಗುರುಗ್ರಾಮ್ನಲ್ಲಿ ಮುಸ್ಲಿಮರ ಅಂಗಡಿಗಳ ಮೇಲೆ ದಾಳಿ ನಡೆಸುತ್ತಿರುವುದನ್ನು ತೋರಿಸುವ ವೀಡಿಯೊದ ಟ್ವೀಟ್ಗೆ ಪ್ರತಿಕ್ರಿಯೆ ನೀಡಿ ಟೀಕಿಸಲಾಗಿತ್ತು. ಅದರ ಸ್ಕ್ರೀನ್ಶಾಟ್ ಈಗ ಹರಿದಾಡುತ್ತಿದೆ.
ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆಯನ್ನು ತಡೆಯಲು ಗುಂಪೊಂದು ಪ್ರಯತ್ನಿಸಿದ ನಂತರ ಗುರುಗ್ರಾಮ್ನಲ್ಲಿ ಕೋಮು ಘರ್ಷಣೆಗಳು ಸಂಭವಿಸಿದವು. ಈ ವೇಳೆ ಪ್ರತಿಯಾಗಿ ಮಸೀದಿ ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚುವ ಮತ್ತು ಧ್ವಂಸಗೊಳಿಸುವ ಘಟನೆಗಳು ನಡೆದಿದ್ದವು.