ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಯಾವುದೇ ಮೈತ್ರಿಕೂಟದ ಭಾಗವಾಗುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಸ್ಪಷ್ಟಪಡಿಸಿದ್ದಾರೆ.
ನಬಣ್ಣಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಮತಾ, 2024ರಲ್ಲಿ ನಾನು ಯಾರೊಂದಿಗೂ ಹೋಗುವುದಿಲ್ಲ, ತೃಣಮೂಲ ಮೈತ್ರಿ ಜನರೊಂದಿಗೆ ಇರುತ್ತದೆ. 2024ರ ಲೋಕಸಭೆ ಚುನಾವಣೆಯಲ್ಲಿ ತೃಣಮೂಲ ಯಾವುದೇ ಮೈತ್ರಿಕೂಟದ ಭಾಗವಾಗುವುದಿಲ್ಲ ಎಂದು ಹೇಳಿದ್ದಾರೆ.
ಸಾಗರದಿಗಿ ಉಪಚುನಾವಣೆಯಲ್ಲಿ ಪಕ್ಷವು ಸೋಲನ್ನು ಎದುರಿಸಿದ ದಿನದಂದು ಟಿಎಂಸಿ ವರಿಷ್ಠರು ಈ ಘೋಷಣೆ ಮಾಡಿದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೇರೊನ್ ಬಿಸ್ವಾಸ್ ಅವರು ಟಿಎಂಸಿಯ ಸಮೀಪದ ಪ್ರತಿಸ್ಪರ್ಧಿಯನ್ನು 22,980 ಮತಗಳಿಂದ ಸೋಲಿಸಿದರು. ಈ ಗೆಲುವು ಕಾಂಗ್ರೆಸ್‌ಗೆ ಬಂಗಾಳದ ವಿಧಾನಸಭೆಯಲ್ಲಿ ಮೊದಲ ಶಾಸಕರನ್ನು ನೀಡಿದೆ.
2021 ರ ರಾಜ್ಯ ಚುನಾವಣೆಯಲ್ಲಿ, ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಎಡರಂಗವು ತಮ್ಮ ಖಾತೆಯನ್ನು ತೆರೆಯಲು ವಿಫಲವಾಗಿತ್ತು.
ಎಡ-ಕಾಂಗ್ರೆಸ್ ಮೈತ್ರಿಯನ್ನು “ಅನೈತಿಕ” ಎಂದು ಕರೆದಿರುವ ಮಮತಾ, ಬಿಜೆಪಿ, ಸಿಪಿಎಂ ಮತ್ತು ಕಾಂಗ್ರೆಸ್ ತಮ್ಮ ನಡುವೆ ಮತಗಳನ್ನು ವರ್ಗಾವಣೆ ಮಾಡುತ್ತಿವೆ. ಇನ್ನು ಮುಂದೆ ಕಾಂಗ್ರೆಸ್ ಅಥವಾ ಸಿಪಿಎಂ ಮಾತುಗಳನ್ನು ಕೇಳುವ ಅಗತ್ಯವಿಲ್ಲ. ಬಿಜೆಪಿಯೊಂದಿಗೆ ಇರುವವರ ಜೊತೆ ತೃಣಮೂಲ ಕೈಜೋಡಿಸುವುದಿಲ್ಲ. ಅವರು ಚುನಾವಣೆಯಲ್ಲಿ ಗೆದ್ದಿರಬಹುದು, ಆದರೆ ಅವರು ನೈತಿಕವಾಗಿ ಸೋತಿದ್ದಾರೆ ಎಂದು ಬಂಗಾಳ ಸಿಎಂ ಪ್ರತಿಪಾದಿಸಿದ್ದಾರೆ.
2024 ರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಮಮತಾ ನಿರ್ಧಾರವು ಪ್ರತಿಪಕ್ಷಗಳ ಒಗ್ಗಟ್ಟಿಗೆ ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ 70 ನೇ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಖರ್ಗೆ, ವಿಭಜಕ ಶಕ್ತಿಗಳ ವಿರುದ್ಧದ ಈ ಹೋರಾಟದಲ್ಲಿ ಸಮಾನ ಮನಸ್ಕ-ವಿರೋಧ ಪಕ್ಷಗಳು ಒಗ್ಗೂಡಬೇಕು. ಅದು ನಮ್ಮ ಬಯಕೆ. ಯಾರು ಮುನ್ನಡೆಸುತ್ತಾರೆ, ಯಾರು ಪ್ರಧಾನಿಯಾಗುತ್ತಾರೆ ಎಂದು ನಾನು ಎಂದಿಗೂ ಹೇಳಲಿಲ್ಲ. ನಾವು ಒಗ್ಗಟ್ಟಿನಿಂದ ಹೋರಾಡಲು ಬಯಸುತ್ತೇವೆ ಎಂದು ಹೇಳಿದ್ದರು.