ಕೇಂದ್ರ ಸರ್ಕಾರದ ತಪ್ಪು ನೀತಿಗಳ ಕಾರಣದಿಂದ ದೈನಂದಿನ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಇಷ್ಟಾದರೂ ಸಹ ಕೇಂದ್ರ ಸರ್ಕಾರ ಬೆಲೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಆರೋಪಿಸಿವೆ.
ಸೋಮವಾರದಂದು ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರತಿಪಕ್ಷಗಳ ಸದಸ್ಯರು, ದೇಶದಲ್ಲಿ ಶ್ರೀಮಂತರು ಮತ್ತು ಬಡವರ ನಡುವಣ ಅಂತರ ಹೆಚ್ಚಾಗಿದೆ. ಬೆಲೆ ಏರಿಕೆಯ ಕಾರಣಕ್ಕೆ 25 ಕೋಟಿ ಮನೆಗಳು ಸಂಕಷ್ಟಕ್ಕೀಡಾಗಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಅಡುಗೆ ಮನೆಗಳ ‘ಲಾಕ್ ಡೌನ್’ ಘೋಷಿಸಬೇಕಾಗುತ್ತದೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಟಿಎಂಸಿ ಸಂಸದೆ ಕಾಕೋಲಿ ಘೋಷ್, ಗೃಹಬಳಕೆ ಎಲ್ ಪಿ ಜಿ ದರ ಏರಿಕೆ ಕಾರಣಕ್ಕೆ ಅಡಿಗೆ ದುಬಾರಿಯಾಗುತ್ತಿದೆ ಎಂಬುದನ್ನು ಬಿಂಬಿಸಲು ಸದನದಲ್ಲಿ ಹಸಿ ಬದನೆಕಾಯಿ ಕಚ್ಚಿದ್ದಾರೆ. ಸಿಲಿಂಡರ್ ಬೆಲೆಯನ್ನು ಕಳೆದ ನಾಲ್ಕು ತಿಂಗಳಲ್ಲಿ ನಾಲ್ಕು ಬಾರಿ ಹೆಚ್ಚಿಸಲಾಗಿದೆ. ಈ ಮೊದಲು 600 ರೂ. ಗಳಿದ್ದ ಸಿಲಿಂಡರ್ ದರ ಈಗ 1,100 ರೂ. ತಲುಪಿದೆ ಎಂದು ಹೇಳಿದ್ದಾರೆ.