ಸಾಮಾನ್ಯವಾಗಿ ಹೆಚ್ಚಿನ ‘ವರದಕ್ಷಿಣೆ’ ನೀಡಲಿಲ್ಲವೆಂಬ ಕಾರಣಕ್ಕೆ ಮದುವೆ ರದ್ದಾಗಿರುವ ಘಟನೆಗಳ ಕುರಿತು ಕೇಳಿರುತ್ತೀರಿ. ಆದರೆ ಇಲ್ಲೊಂದು ಪ್ರಕರಣದಲ್ಲಿ ‘ವಧುದಕ್ಷಿಣೆ’ ಕಾರಣಕ್ಕೆ ಯುವತಿ ಮದುವೆ ಮುರಿದುಕೊಂಡಿದ್ದಾಳೆ. ಇಂಥದೊಂದು ಘಟನೆ ತೆಲಂಗಾಣದಲ್ಲಿ ನಡೆದಿದೆ.
ಹೌದು, ಅಲ್ಲಿನ ಬುಡಕಟ್ಟು ಜನಾಂಗದಲ್ಲಿ ವರ, ವಧುದಕ್ಷಿಣೆ ನೀಡಿ ಮದುವೆ ಮಾಡಿಕೊಳ್ಳಬೇಕಾಗುತ್ತದೆ. ಅದೇ ರೀತಿ ಗುರುವಾರ ಹೈದರಾಬಾದ್ ಸಮೀಪದ ಘಾಟ್ಕೇಸರ್ ನಲ್ಲಿ ಮದುವೆ ಸಮಾರಂಭ ಆಯೋಜಿಸಲಾಗಿತ್ತು. ವರ, ಭದ್ರಾದ್ರಿಯ ಅಸ್ವಾರಪೇಟ್ ಗ್ರಾಮದ ಯುವತಿಗೆ ಎರಡು ಲಕ್ಷ ರೂಪಾಯಿಗಳಿಗೂ ಅಧಿಕ ವಧುದಕ್ಷಿಣೆ ನೀಡಿ ವಿವಾಹ ನಿಗದಿಪಡಿಸಿಕೊಂಡಿದ್ದ.
ವಧು, ಮತ್ತಾಕೆಯ ಕುಟುಂಬಸ್ಥರು ತಮ್ಮ ಸಂಬಂಧಿಕರ ಜೊತೆ ನಿಗದಿತ ದಿನದಂದು ಬಂದಿದ್ದು, ಆದರೆ ವಧು ಮಂಟಪಕ್ಕೆ ಬರಲು ನಿರಾಕರಿಸಿದ್ದಾಳೆ. ಕಾರಣ ಕೇಳಿದಾಗ ವಧುದಕ್ಷಿಣೆ ಕಡಿಮೆಯಾಗಿದೆ ಎಂದು ಹೇಳಿದ್ದು, ಇದರಿಂದಾಗಿ ವರ, ಮತ್ತಾತನ ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಮದುವೆಗೆ ಬಂದ ಸಂಬಂಧಿಕರು ಸಹ ಕೊನೆ ಕ್ಷಣದಲ್ಲಿ ವಧು ಇಟ್ಟ ಡಿಮ್ಯಾಂಡ್ ಗೆ ಹೌಹಾರಿದ್ದಾರೆ. ವಧುವಿನ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಅಂತಿಮವಾಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆಗ ಗೊತ್ತಾದ ಸಂಗತಿ ಎಂದರೆ ವಧುವಿಗೆ ಈ ಮದುವೆ ಇಷ್ಟವಿಲ್ಲದ ಕಾರಣಕ್ಕೆ ಈ ರೀತಿ ಮಾಡಿದ್ದಾಳೆ ಎನ್ನಲಾಗಿದೆ.
ಅಂತಿಮವಾಗಿ ವಧು ಮತ್ತು ವರನ ಕುಟುಂಬದವರ ನಡುವೆ ರಾಜಿ ಪಂಚಾಯಿತಿ ನಡೆದಿದ್ದು, ವಧುವಿನ ಕಡೆಯವರು ತಾವು ಪಡೆದಿದ್ದ ಎರಡು ಲಕ್ಷ ರೂಪಾಯಿಗಳನ್ನು ಮರಳಿಸಬೇಕೆಂಬ ತೀರ್ಮಾನವಾಗಿದೆ. ಹೀಗಾಗಿ ಪೊಲೀಸರು ಯಾವುದೇ ಪ್ರಕರಣ ದಾಖಲಿಸದೆ ಕಳುಹಿಸಿಕೊಟ್ಟಿದ್ದು, ಮದುವೆಗೆ ಬಂದ ನೆಂಟರಿಷ್ಟರು ಮಾತ್ರ ಅದು ರದ್ದಾದ ಕಾರಣ ಪೆಚ್ಚು ಮೋರೆ ಹಾಕಿಕೊಂಡು ಹೋಗಿದ್ದಾರೆ.