13 ವರ್ಷಗಳ ಹಿಂದೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 56 ಮಂದಿ ಸಾವನ್ನಪ್ಪಿದ್ದರು. ಈ ಸಂಬಂಧ ಇಂದು ಇಲ್ಲಿನ ವಿಶೇಷ ನ್ಯಾಯಾಲಯವು 77 ಮಂದಿ ಆರೋಪಿಗಳ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ.
ಇದೀಗ ಈ ಪ್ರಕರಣದ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದೆ. ಈ ಪ್ರಕರಣದಲ್ಲಿ ಸುದೀರ್ಘ ವಿಚಾರಣೆಯನ್ನು ಕೈಗೊಂಡಿದ್ದ ನ್ಯಾಯಾಲಯವು ಬರೋಬ್ಬರಿ 1100 ಸಾಕ್ಷ್ಯಗಳನ್ನು ವಿಚಾರಣೆಗೆ ಒಳಪಡಿಸಿತ್ತು. ಸರಣಿ ಬಾಂಬ್ ಸ್ಫೋಟ ನಡೆದ 1 ವರ್ಷಗಳ ಬಳಿಕ ಅಂದರೆ 2009ರ ಡಿಸೆಂಬರ್ನಿಂದ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.
ವಿಶೇಷ ನ್ಯಾಯಾಧೀಶ ಎ.ಆರ್. ಪಟೇಲ್ ಗುರುವಾರದಂದು ಈ ಪ್ರಕರಣದ ವಿಚಾರಣೆ ಮುಕ್ತಾಯಗೊಂಡಿದೆ ಎಂದು ಹೇಳಿದ್ದಾರೆ. ಪ್ರಕರಣ ಸಂಬಂಧ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದೆ. 2008ರ ಜುಲೈ 26ರಂದು ಅಹಮದಾಬಾದ್ನಲ್ಲಿ ಬಾಂಬ್ ಸ್ಪೋಟಗೊಂಡಿತ್ತು. ಈ ದುರಂತದಲ್ಲಿ ಕನಿಷ್ಟ 56 ಮಂದಿ ಸಾವನ್ನಪ್ಪಿದ್ದರು. ಹಾಗೂ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಇಂಡಿಯನ್ ಮುಜಾಹಿದ್ದೀನ್ ಹಾಗೂ ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾ ಈ ಸ್ಪೋಟದ ರೂವಾರಿ ಎಂದು ಹೇಳಿದ್ದಾರೆ. 2002ರ ಗೋಧ್ರಾ ಗಲಭೆಗೆ ಪ್ರತೀಕಾರವಾಗಿ ಐಎಂ ಭಯೋತ್ಪಾದಕರು ಈ ಸ್ಪೋಟಕ್ಕೆ ಪ್ಲಾನ್ ಮಾಡಿದ್ದರು ಎನ್ನಲಾಗಿದೆ.
ಅಹಮದಾಬಾದ್ನಲ್ಲಿ ಸರಣಿ ಸ್ಪೋಟ ನಡೆದ ಕೆಲವು ದಿನಗಳ ಬಳಿಕ ಪೊಲೀಸರು ಸೂರತ್ನ ವಿವಿಧ ಭಾಗಗಳಲ್ಲಿ ಬಾಂಬ್ಗಳನ್ನು ವಶಕ್ಕೆ ಪಡೆದಿದ್ದರು. ಬಾಂಬ್ ಸ್ಫೋಟದ ಸಂಬಂಧ ಅಹಮದಾಬಾದ್ನಲ್ಲಿ 20 ಹಾಗೂ ಸೂರತ್ನಲ್ಲಿ 15 ಎಫ್ಐಆರ್ಗಳನ್ನು ದಾಖಲಿಸಲಾಗಿತ್ತು. ನ್ಯಾಯಾಲಯವು ಎಲ್ಲಾ 35 ಪ್ರಕರಣಗಳನ್ನು ವಿಲೀನಗೊಳಿಸಿ ವಿಚಾರಣೆ ಕೈಗೆತ್ತಿಕೊಂಡಿತ್ತು.