ಹಾಸನ: ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ವಿರುದ್ಧ ನೂರಾರು ಮರಗಳನ್ನು ಕಡಿದಿರುವ ಆರೋಪ ಕೇಳಿಬಂದಿದ್ದು, ಈ ಕುರಿತು ಅರಣ್ಯ ಸಚಿವರಿಗೆ ದೂರು ನೀಡಲಾಗಿದೆ. ಈ ನಡುವೆ ಮರಗಳನ್ನು ಕಡಿದಿರುವುದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ವಿಕ್ರಂ ಸಿಂಹ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿಕ್ರಂ ಸಿಂಹ, ನಾನು ಶುಂಠಿ ಬೆಳೆಯಲು ಆ ಭೂಮಿಯನ್ನು ಒಂದು ವರ್ಷಕ್ಕೆ ಅಗ್ರಿಮೆಂಟ್ ಮಾಡಿಕೊಂಡಿದ್ದೆ. ಅಲ್ಲಿ ಮರಗಳನ್ನು ಕಡಿದಿರುವುದು ನನಗೆ ಗೊತ್ತಿಲ್ಲ. ಮರಗಳ ಮಾರಣಹೋಮಕ್ಕೂ ನನಗೂ ಯಾವ ಸಂಬಂಧವಿಲ್ಲ. ಇದರಲ್ಲಿ ನನ್ನ ಕೈವಾಡವಿಲ್ಲ ಎಂದಿದ್ದಾರೆ.
ಕಳೆದ ಒಂದು ತಿಂಗಳಿಂದ ಏನೆಲ್ಲಾ ಬೆಳವಣಿಗೆಗಳು ನಡೆಯುತ್ತಿವೆ ಎಂಬುದನ್ನು ಗಮನಿಸುತ್ತಲೇ ಇದ್ದೀರಾ. ಲೊಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ನನ್ನ ಅಣ್ಣ ಪ್ರತಾಪ್ ಸಿಂಹ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದೆಲ್ಲವೂ ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ನನ್ನ ವಿರುದ್ಧ ತನಿಖೆ ನಡೆಸಲಿ. ಅರಣ್ಯ ಸಚಿವರಿಗೆ ನನ್ನ ವಿರುದ್ಧ ದೂರು ನೀಡಿರುವ ದೀಪಕ್ ಯಾರೆಂಬುದೂ ನನಗೆ ಗೊತ್ತಿಲ್ಲ. ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ.