ಬೀದರ್: ವೃಕ್ಷ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತರಲು ಚಿಂತನೆ ನಡೆದಿದೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಬಾಲ್ಕಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಾಜ್ಯದ ಗೋಮಾಳ, ಅರಣ್ಯ, ಸರ್ಕಾರಿ ಭೂಮಿ, ಪಟ್ಟಾ ಭೂಮಿಯಲ್ಲಿ ಬೃಹತ್ ಮರಗಳ ಅಕ್ರಮ ಕಡಿತಲೆ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಗಿಡ ಮರ ಉಳಿಸಲು ವೃಕ್ಷ ಸಂರಕ್ಷಣಾ ಕಾಯಿದೆ -1976ಕ್ಕೆ ತಿದ್ದುಪಡಿ ತರಲು ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.
ಅನುಮತಿ ಇಲ್ಲದೆ ಯಾರ ನಿಯಮ ಬಾಹಿರವಾಗಿ ಅಕ್ರಮವಾಗಿ ಮರ ಕಡಿತಲೆ ಮಾಡಿದಲ್ಲಿ ಮರದ ಮಾರುಕಟ್ಟೆ ಮೌಲ್ಯಗಿಂತ ಹೆಚ್ಚು ದಂಡದೊಂದಿಗೆ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗ, ಉತ್ತರ ಕನ್ನಡ, ಹಾಸನ, ಕೊಡಗು ಸೇರಿ ವಿವಿಧ ಜಿಲ್ಲೆಗಳಲ್ಲಿ ಅಕ್ರಮವಾಗಿ ನೂರಾರು ಮರ ಕಡಿತಲೆ ಮಾಡಿದ ದೂರುಗಳು ಬಂದಿವೆ. ಪ್ರಾಣವಾಯು ನೀಡುವ, ತಾಪಮಾನ ತಡೆಯುವ, ಭೂ ಫಲವತ್ತತೆಯನ್ನು ಕಾಪಾಡುವ ವೃಕ್ಷಗಳ ಸಂರಕ್ಷಣೆ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಪಟ್ಟಾ ಭೂಮಿ, ಗೋಮಾಳ, ಸರ್ಕಾರಿ ಭೂಮಿಯಲ್ಲಿರುವ ಬೀಟೆ, ಶ್ರೀಗಂಧ, ತೇಗ ಮೊದಲಾದ ಬೆಲೆಬಾಳುವ ಮರಗಳ ಜಿಯೋ ಟ್ಯಾಗ್ ಮಾಡಲು ಸೂಚಿಸಲಾಗಿದೆ. ಇದರಿಂದ ಅಕ್ರಮವಾಗಿ ಮರ ಕಡಿಯಲು ಕಡಿವಾಣ ಹಾಕಲಾಗುವುದು ಎಂದು ತಿಳಿಸಿದ್ದಾರೆ.