ಬೆಂಗಳೂರು: ಕೇಂದ್ರ ಆರೋಗ್ಯ ಸಚಿವಾಲಯದ ಅತಿ ವಿರಳ ಕಾಯಿಲೆ ಘಟಕದಿಂದ ದೇಶದ ಎಲ್ಲಾ ಉತ್ಕೃಷ್ಟತಾ ಕೇಂದ್ರಗಳಿಗೆ ಪತ್ರ ಬರೆದು ಅತಿ ವಿರಳ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಮತ್ತು ಅವರ ಚಿಕಿತ್ಸೆಗೆ ಅಗತ್ಯವಿರುವಷ್ಟು ಅನುದಾನದ ವಿವರ ಸಲ್ಲಿಸುವಂತೆ ತಿಳಿಸಲಾಗಿದೆ.
ಅತಿ ವಿರಳ ಕಾಯಿಲೆಯಿಂದ ಬಳಲುತ್ತಿರುವ ಪ್ರತಿ ರೋಗಿಯ ಚಿಕಿತ್ಸೆಗೆ ಗರಿಷ್ಠ 50 ಲಕ್ಷ ರೂಪಾಯಿ ನೆರವು ನೀಡಲಾಗುತ್ತದೆ. ಅಂತಹ ರೋಗಿಗಳನ್ನು ಗುರುತಿಸಿ ಅವರ ಚಿಕಿತ್ಸೆಗೆ ತಗಲುವ ವೆಚ್ಚದ ಪ್ರಸ್ತಾವವನ್ನು ದೇಶದ ವಿವಿಧ ರಾಜ್ಯಗಳಲ್ಲಿ ಇರುವ ಉತ್ಕೃಷ್ಟತಾ ಕೇಂದ್ರಗಳು ಸಲ್ಲಿಸಬೇಕು ಎಂದು ಹೇಳಲಾಗಿದೆ.
ದೇಶದಲ್ಲಿರುವ 9 ಉತ್ಕೃಷ್ಟತಾ ಕೇಂದ್ರಗಳಲ್ಲಿ ಎರಡು ಕೇಂದ್ರಗಳು ಮಾತ್ರ ಇದುವರೆಗೆ ಪ್ರಸ್ತಾವ ಸಲ್ಲಿಸಿವೆ. ಈ ಬಗ್ಗೆ ಪತ್ರದಲ್ಲಿ ಸಚಿವಾಲಯ ಉಲ್ಲೇಖಿಸಿದ್ದು, ಅತಿ ವಿರಳ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆ ನೆರವಿಗೆ ಕಾಯ್ತಿರಿಸಿದ ಅನುದಾನ ಬಳಸಿ ಪ್ರಸ್ತಾವನೆ ಸಲ್ಲಿಸಬೇಕು. ಇದರಿಂದ ಅನುದಾನ ಬಳಕೆ ಮತ್ತು ಮುಂದಿನ ಸಾಲಿನಲ್ಲಿ ಅನುದಾನ ಕಾಯ್ದಿರಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.